ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ರಾಜ್ಯ ಪ್ರವಾಸದ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದಲ್ಲಿ ಎರಡು ದಿನಗಳಲ್ಲಿ 3 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಜೆ.ಪಿ.ನಡ್ಡಾ ಅವರು ಜನವರಿ 5 ಮತ್ತು 6ರಂದು ಎರಡು ದಿನಗಳ ಭೇಟಿಗೆ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜನವರಿ 5 ರಂದು ಮಧ್ಯಾಹ್ನ ತುಮಕೂರಿನಲ್ಲಿ, ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ಅಂದು ಸಂಜೆ ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ, ಒನಕೆ ಓಬವ್ವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಶ್ರೀ ಮಾದಾರ ಚೆನ್ನಯ್ಯ ಮಠ, ಸಿರಿಗೆರೆ ಶ್ರೀ ತರಳಬಾಳು ಮಠಕ್ಕೆ ಭೇಟಿ ನೀಡಿದ ನಂತರ ದಾವಣಗೆರೆ ವಿಭಾಗದ ಸಂಸದರು, ಶಾಸಕರು, ಪರಿಷತ್ ಸದಸ್ಯರು ಮತ್ತು ಜಿಲ್ಲಾ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 6ರಂದು ಬೆಳಗ್ಗೆ ಹರಿಹರದ ಶ್ರೀ ಪಂಚಮಸಾಲಿ ಮಠ, ಬೆಳ್ಳುಡಿಯ ಶ್ರೀ ಕನಕಗುರುಪೀಠ, ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ದಾವಣಗೆರೆ ದಕ್ಷಿಣದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತ್ರಿಶೂಲ ಕಾಲ ಭವನದಲ್ಲಿ ವಿವಿಧ ವಲಯಗಳ ತಜ್ಞರು ಮತ್ತು ಪ್ರಮುಖರ ಜೊತೆಗೆ ಸಭೆ. ಅಲ್ಲಿಂದ ಮತ್ತೆ ತುಮಕೂರಿಗೆ ವಾಪಸ್ ಪ್ರಯಾಣ ಮಾಡಲಿದ್ದಾರೆ. ತುಮಕೂರಿನ ಪ್ರೆಸಿಡೆನ್ಸಿ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದ್ದು, 25 ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ನಡ್ಡಾ ಭಾಷಣ ಮಾಡಲಿದ್ದಾರೆ. ನಂತರ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ. ಅಲ್ಲಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ.
ಸಂಜೆ ಅವರು ತುಮಕೂರು ಜಿಲ್ಲೆಯ ಸಿರಾದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಡ್ಡಾ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಹ ರಾಜ್ಯ ಪ್ರವಾಸ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಒಂದು ದಿನ ಮುಂಚೆ ಅಂದರೆ ನಾಳೆ(ಜನವರಿ 4) ಬೆಂಗಳೂರಿಗೆ ಆಗಮಿಸಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ