ಸಲಿಂಗ ವಿವಾಹ: ಹೈಕೋರ್ಟ್‌ಗಳ ಮುಂದಿರುವ ಎಲ್ಲ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್‌ ಲಿಂಗಿ, ಅಲೈಂಗಿಕ ಮತ್ತಿತರ (ಎಲ್‌ಜಿಬಿಟಿಕ್ಯುಐಎ ಪ್ಲಸ್‌) ಸಮುದಾಯಕ್ಕೆ ಸೇರಿದವರಿಗೂ ವಿವಾಹದ ಹಕ್ಕನ್ನು ವಿಸ್ತರಿಸುವಂತೆ ಕೋರಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ. ಇದೇ ಪ್ರಶ್ನೆಯನ್ನು ಒಳಗೊಂಡ ಹಲವು ಅರ್ಜಿಗಳು ದೆಹಲಿ, ಕೇರಳ ಹಾಗೂ ಗುಜರಾತ್ ಹೈಕೋರ್ಟ್‌ಗಳಲ್ಲಿ ಬಾಕಿ ಇರುವುದರಿಂದ, ಅವುಗಳನ್ನು ಈ ನ್ಯಾಯಾಲಯಕ್ಕೆ ವರ್ಗಾಯಿಸಿ ಇತ್ಯರ್ಥಪಡಿಸಬೇಕೆಂದು ನಾವು ಭಾವಿಸುತ್ತೇವೆ. ಎಲ್ಲಾ ರಿಟ್‌ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ದೇಶಿಸುತ್ತೇವೆ ಎಂದು ಪೀಠ ಹೇಳಿದೆ.
ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಅರ್ಜಿದಾರರು ವರ್ಚುವಲ್‌ ವಿಧಾನದಲ್ಲಿ (ವೀಡಿಯೊ ಕಾನ್ಫರೆನ್ಸ್‌ ಮೂಲಕ) ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದೂ ಪೀಠ ಹೇಳಿದೆ.
ಎಲ್ಲಾ ಪಕ್ಷಕಾರರು ಲಿಖಿತ ಅಹವಾಲು ಮತ್ತು ಪ್ರತ್ಯುತ್ತರಗಳನ್ನು ಸಲ್ಲಿಸಿದ ಬಳಿಕ ಮಾರ್ಚ್ 13ರಂದು ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಅರುಂಧತಿ ಕಾಟ್ಜು ಅವರನ್ನು ಅರ್ಜಿದಾರರ ನೋಡಲ್ ವಕೀಲೆಯಾಗಿ ನ್ಯಾಯಾಲಯ ನೇಮಿಸಿದ್ದು , ನ್ಯಾಯವಾದಿ ಕನು ಅಗರವಾಲ್ ಅವರು ಕೇಂದ್ರ ಸರ್ಕಾರದ ನೋಡಲ್ ನ್ಯಾಯವಾದಿಯಾಗಿರುತ್ತಾರೆ.
ಬಯಸಿದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಎಲ್‌ಜಿಬಿಟಿಕ್ಯುಐಎ ಪ್ಲಸ್‌ ಸಮುದಾಯದವರಿಗೂ ವಿಸ್ತರಿಸಬೇಕು ಎಂದು ಕೋರಿ ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಸಲಿಂಗ ಜೋಡಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ದಾಂಗ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಮತ್ತೊಂದೆಡೆ ಸಲಿಂಗ ಜೋಡಿಯಾದ ಪಾರ್ಥ್ ಫಿರೋಜ್ ಮೆಹ್ರೋತ್ರಾ ಮತ್ತು ಉದಯ್ ರಾಜ್ ಅವರು ಸಲ್ಲಿಸಿದ್ದ ಇನ್ನೊಂದು ಅರ್ಜಿಯಲ್ಲಿ ಸಲಿಂಗ ವಿವಾಹವನ್ನು ಗುರುತಿಸದಿರುವುದು ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆ ಎಂದು ತಿಳಿಸಲಾಗಿತ್ತು. ಆ ಬಳಿಕ ವಿವಿಧ ಹೈಕೋರ್ಟ್‌ಗಳಲ್ಲಿ ಇಂಥದ್ದೇ ಅರ್ಜಿಗಳು ಸಲ್ಲಿಕೆಯಾಗಿ ಈಗ ಹೈಕೋರ್ಟ್‌ಗಳಿಂದ ಸುಪ್ರೀಂಕೋರ್ಟ್‌ಗೆ ಪ್ರಕರಣಗಳು ವರ್ಗವಾಗಿವೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement