ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12ರಿಂದ ರಾಷ್ಟ್ರೀಯ ಯುವಜನ ಉತ್ಸವ: ಲಾಂಛನ, ಮಾಸ್ಕಟ್ ಅನಾವರಣ

ಬೆಂಗಳೂರು: ‘ಜನವರಿ 12ರಿಂದ 16ರ ವರಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನ ಉತ್ಸವದ ಲಾಂಛನ ಮತ್ತು ಮಾಸ್ಕಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬಿಡುಗಡೆ ಮಾಡಿದರು. ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ ಸಿಂಗ್ ಠಾಕೂರ್ ವರ್ಚುವಲ್ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
‘ವಿಕಸಿತ್ ಯುವ- ವಿಕಸಿತ್ ಭಾರತ್’ ಎಂಬ ವಿಷಯದಡಿ ನಡೆಯಲಿರುವ ಈ ಉತ್ಸವವನ್ನು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ12ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ಉದ್ಘಾಟಿಸಲಿದ್ದಾರೆ. ಉತ್ಸವದಲ್ಲಿ ದೇಶದ ವಿವಿಧೆಡೆಯಿಂದ ಸುಮಾರು 7,500 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಲಾಂಛನ: ಒಡಿಶಾದ ಬನ್ಸಿಲಾಲ್ ಕೇತ್ಕಿ ಅವರು ರೂಪಿಸಿದ ಲಾಂಛನವನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದ್ದು, ಅವರಿಗೆ ₹ 50 ಸಾವಿರ ಬಹುಮಾನ ದೊರೆಯಲಿದೆ. ಈ ಲಾಂಛನ ಭಾರತದ ರಾಷ್ಟ್ರೀಯ ಪುಷ್ಪವಾದ ತಾವರೆಯಿಂದ ಪ್ರೇರಿತವಾಗಿದ್ದು, ರಾಷ್ಟ್ರೀಯತೆ, ನಿಸ್ವಾರ್ಥ ಸೇವೆ ಮತ್ತು ವೈವಿಧ್ಯತೆಯ ನಡುವೆಯೂ ಇರುವ ಏಕತೆ ಹಾಗೂ ಸಹಕಾರವನ್ನು ಇದು ಪ್ರತಿನಿಧಿಸುತ್ತಿದೆ. ಜೊತೆಗೆ, ಜಿ20 ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನೂ ಅಭಿವ್ಯಕ್ತಿಸುತ್ತದೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

‘ಚಂಪಿ ಚಿಕ್ಕ’ ಮಾಸ್ಕಟ್ : ಬೆಂಗಳೂರಿನ ಇನ್ಬಂ ಅವರು ರೂಪಿಸಿದ ‘ಚಂಪಿ ಚಿಕ್ಕ’ ಮಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ ₹ 50 ಸಾವಿರ ಬಹುಮಾನ ದೊರೆಯಲಿದೆ. ಇದರಲ್ಲಿ ಆನೆಯ ವಿನ್ಯಾಸವಿದ್ದು, ಕರ್ನಾಟದಲ್ಲಿ ಅತಿ ಹೆಚ್ಚಿರುವ ಆನೆಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜಾಗತಿಕವಾಗಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ವಿಶ್ವ ಶಾಂತಿಯ ಜೊತೆಗೆ ಕ್ರೀಡೆ, ಸ್ಟಾರ್ಟ್‌ಅಪ್‌, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವ ಮತ್ತು ಆಧುನಿಕ ಭಾರತವನ್ನು ಬಿಂಬಿಸುತ್ತದೆ.
ಲಾಂಛನ ಬಿಡುಗಡೆಯ ಬಳಿಕ ಅನುರಾಗ ಸಿಂಗ್ ಠಾಕೂರ್ ನೇತೃತ್ವದಲ್ಲಿ ಯುವಜನ ಉತ್ಸವ ಸಮಿತಿಯ ಸಭೆ ನಡೆಸಲಾಯಿತು. ಯುವಜನ ಮೇಳದಲ್ಲಿ ಯುವ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ, ನಟಿ ತಾರಾ ಅನುರಾಧಾ, ಯುವಜನ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮೊದಲಾದವರು ಇದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement