ಇಂದು ರಾಷ್ಟ್ರೀಯ ಯುವ ದಿನಾಚರಣೆ: ಭಾರತದ ಯುವಶಕ್ತಿಗೆ ಬೇಕು ಸಮಾನ ಅವಕಾಶ, ಗುಣಮಟ್ಟದ ಶಿಕ್ಷಣ

(ಇಂದು, ಜನವರಿ ೧೨ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಆ ನಿಮಿತ್ಯವಾದ ಲೇಖನ)
ಕೇಂದ್ರ ಸರ್ಕಾರ ೧೯೮೫ ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನ ೧೨ ಅನ್ನು ರಾಷ್ಟ್ರೀಯ ಯುವ ದಿನಾಚರಣೆ ಆಚರಿಸುತ್ತಾ ಬಂದಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡುತ್ತಿದ್ದಾರೆ.
ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಚೌಕಟ್ಟು ಪ್ರತಿ ರಾಷ್ಟ್ರದ ಯಶಸ್ಸಿನ ಆಧಾರವೆಂದರೆ ಅದು ಯುವ ಪೀಳಿಗೆ ಮತ್ತು ಯುವಕರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದೇಶದ ಭವಿಷ್ಯವಿದೆ. ಪ್ರತಿಯೊಂದು ರಾಷ್ಟ್ರವು ಯುವಕರ ಮೇಲೆ ಅವಲಂಬಿತವಾಗಿದೆ. ಅಂತೆಯೇ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅಧಿಕವಾಗಿರುತ್ತದೆ.
ಇಂದಿನ ಯುಗದಲ್ಲಿ ಎಲ್ಲ ದೇಶಗಳ ಆರ್ಥಿಕತೆಯನ್ನು ನಿಭಾಯಿಸುವ ಕೆಲಸವನ್ನು ಯುವಕರು ಮಾಡುತ್ತಾರೆ. ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದೇಶದ ನಿಜವಾದ ಹಾಗೂ ಅತ್ಯುತ್ತಮ ಯೋಧರೂ ಕೂಡ ಯುವಕರೇ ಆಗಿರುತ್ತಾರೆ. ಹಾಗಾಗಿ ಯುವಶಕ್ತಿ ಎನ್ನುವುದು ಆಯಾ ದೇಶದ ದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯನ್ನು ಸಂಪೂರ್ಣವಾಗಿ ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡಾಗ ಮಾತ್ರ ಆಯಾ ದೇಶಗಳ ಸಂಪೂರ್ಣ ಅಭಿವೃದ್ಧಿಯಾಗುತ್ತದೆ.
ಇಂದು ಅಮೆರಿಕ, ಜಪಾನ್, ಫ್ರಾನ್ಸ ನಂತಹ ಹಲವಾರು ದೇಶಗಳು ಯುವಶಕ್ತಿಯಿಂದ ವೇಗವಾಗಿ ಅಭಿವೃದ್ಧಿ ಕಂಡಿರುವದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಯುವ ಶಕ್ತಿಯನ್ನು ಹೊಂದಿರುವ ಜಗತ್ತಿನ ಯುವ ರಾಷ್ಟ್ರವೆಂದರೆ ಅದು ಭಾರತವಾಗಿದೆ.
ರಾಷ್ಟ್ರ ನಿರ್ಮಾಣದ ಅರ್ಥ :
ಯಾವುದೇ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ಆರ್ಥಿಕತೆಯ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣವೆಂದು ಕರೆಯಬಹುದಾಗಿದೆ. ರಾಷ್ಟ್ರ ನಿರ್ಮಾಣವು ದೇಶದ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ನೀಡುತ್ತದೆ. ನಿಯಮಗಳು, ಕಾನೂನುಗಳು, ಶಿಕ್ಷಣ ವ್ಯವಸ್ಥೆ ಹಾಗೂ ಇನ್ನಿತರ ಎಲ್ಲ ಕ್ಷೇತ್ರಗಳ ವ್ಯವಸ್ಥೆಯಲ್ಲಿನ ಸುಧಾರಣೆಗಳನ್ನು ನಾವು ರಾಷ್ಟ್ರ ನಿರ್ಮಾಣವೆಂದು ಕರೆಯುತ್ತೇವೆ.
ಯುವಶಕ್ತಿ :
ಇತಿಹಾಸದ ಕಾಲದಿಂದಲೂ ಯುವಕರು ನಮ್ಮ ರಾಷ್ಟ್ರಕ್ಕೆ ಅನೇಕ ಬದಲಾವಣೆಗಳು ಅಭಿವೃದ್ಧಿ, ಸಮೃದ್ಧಿ ಮತ್ತು ಗೌರವವನ್ನು ತರುವಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆಂಬುದನ್ನು ನಾವು ಕಾಣಬಹುದಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ಅವರನ್ನು ಸಕಾರಾತ್ಮಕ ದಿಕ್ಕಿನಲ್ಲಿ ತರಬೇತಿಯ ಮೂಲಕ ಸಜ್ಜುಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅವರ ಉನ್ನತಿಗಾಗಿ ಹಲವು ಸರಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ. ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಇನ್ನೂ ಯುವಕರ ಸಮರ್ಪಕ ಅಭಿವೃದ್ಧಿ ಮತ್ತು ಶಿಕ್ಷಣದಲ್ಲಿ ಹಿಂದುಳಿದಿವೆ.
ಬಾಲ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನಾದರೂ ಆಗಬೇಕೆಂದು ಕನಸು ಕಾಣುತ್ತಾನೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಮಕ್ಕಳಲ್ಲಿ ಕೆಲವು ಉದ್ದೇಶಗಳಿರಬೇಕು. ಮಗು ತನ್ನ ಶಿಕ್ಷಣವನ್ನು ಪೂರ್ಣಗೊಳಿಸುವ ಮೂಲಕ ತನ್ನ ಉದ್ದೇಶ ಹಾಗೂ ಗುರಿಗಳನ್ನು ಸಾಧಿಸಲು ಕೌಶಲ್ಯಗಳನ್ನು ಪಡೆಯುತ್ತದೆ. ಆದ್ದರಿಂದ ಇದು ರಾಷ್ಟ್ರದ ಪ್ರಗತಿಯ ಬಗ್ಗೆ ಆ ವ್ಯಕ್ತಿಯ ಸಕಾರಾತ್ಮಕ ಮನೋಭಾವವಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಯುವಕರಲ್ಲಿ ರಾಷ್ಟ್ರದ ಭರವಸೆ :
ರಾಷ್ಟ್ರದ ಅಭಿವೃದ್ಧಿ ಹಾಗೂ ಪ್ರಗತಿಗೆ ದೇಶದಲ್ಲಿ ನೆಲೆಸಿರುವ ಜನರು ಸ್ವತಃ ಜವಾಬ್ದಾರರಾಗಿರುತ್ತಾರೆ. ಸಾಮಾನ್ಯವಾಗಿ ಯಾವುದೇ ರಾಷ್ಟ್ರದ ಒಟ್ಟು ಜನಸಂಖ್ಯೆಯ ೨೦-೩೦ % ಪ್ರತಿಶತದಷ್ಟು ಯುವಕರು ಇದ್ದರೆ ನಮ್ಮ ದೇಶದಲ್ಲಿ ಯುವಕರು ಪ್ರತಿಶತ ೬೫ ರಷ್ಟಿದ್ದಾರೆ. ಇದು ಭಾರತದಂತಹ ದೇಶಕ್ಕೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ದುಡಿಯುವ ಜನರು ಮತ್ತು ವಿಶೇಷವಾಗಿ ಯುವಕರು ಯಾವುದೇ ರಾಷ್ಟ್ರದ ಪ್ರಗತಿಯನ್ನು ನಿರ್ಧರಿಸುತ್ತಾರೆ. ರಾಷ್ಟ್ರದ ಪ್ರಗತಿಯು ಅನೇಕ ಕ್ರಮಗಳಿಂದ ನಿರ್ಧರಿಸಲ್ಪಡುತ್ತದೆ. ಅಂದರೆ, ವಿಜ್ಞಾನ, ತಂತ್ರಜ್ಞಾನ ಆರೋಗ್ಯ ನಿರ್ವಹಣೆ ಮತ್ತು ಇತರ ಬೆಳವಣಿಗೆಯಿಂದ ಈ ಎಲ್ಲ ಮಾನದಂಡಗಳನ್ನು ಪೂರೈಸಲು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಆಧಾರದ ಮೇಲೆ ಯುವಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಈ ಕೆಳಕಂಡ ತತ್ವಗಳನ್ನು ಅನುಸರಿಸಬಹುದಾಗಿದೆ.
ಈ ಜನರು ತಮ್ಮ ಯೌವನದಲ್ಲಿರುವಾಗ ಅಪಾರ ಸಾಮಾರ್ಥ್ಯ ತುಂಬುವುದು ಅವರು ಸಾಮಾರ್ಥ್ಯದಿಂದ ಉತ್ತಮ ಕೆಲಸ ಮಾಡುವಂತೆ ಪ್ರೇರಣೆ ನೀಡುವುದು ಇದರಿಂದಾಗಿ ಯುವಕರಲ್ಲಿ ಬದಲಾವಣೆ ಕಂಡು ಬಂದು ತಮ್ಮ ಸೃಜನಶೀಲತೆ ಹಾಗೂ ತ್ವರಿತ ಕಲಿಕೆಯ ಕೌಶಲ್ಯದ ಮೂಲಕ ರಾಷ್ಟ್ರದಲ್ಲಿ ಬದಲಾವಣೆ ತರುವ ಶಕ್ತಿಯ ಮೂಲಕ ಇತರರಿಗೆ ಮಾದರಿಯಾಗುತ್ತಾರೆ.

ಯುವಕರ ಪಾತ್ರ:
ಯುವ ಮನಸ್ಸು ಪ್ರತಿಭೆ ಮತ್ತು ಸೃಜನಶೀಲತೆಯಿಂದ ತುಂಬಿರುತ್ತದೆ. ಅವರು ಒಂದು ವಿಷಯದ ಬಗ್ಗೆ ಧ್ವನಿ ಎತ್ತಿದರೆ ಅದರಲ್ಲಿ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗುತ್ತಾರೆ. ಯುವಕರನ್ನು ರಾಷ್ಟ್ರದ ಧ್ವನಿ ಎಂದು ಪರಿಗಣಿಸಲಾಗಿದೆ. ಯುವಕರು ರಾಷ್ಟ್ರದ ಸಂಪನ್ಮೂಲ ಅಥವಾ ಕಚ್ಚಾ ವಸ್ತುಗಳಿದ್ದಂತೆ. ಅವುಗಳಿಗೆ ಸರಿಯಾಗಿ ಸಾಣೆ ಹಿಡಿದು ಮೂರ್ತರೂಪ ನೀಡಿದಾಗ ಮಾತ್ರ ರಾಷ್ಟ್ರದ ಬೆಳವಣಿಗೆ ಸಾಧ್ಯ. ಯುವಕರು ಯಾವಾಗಲೂ ತಮ್ಮ ಜೀವನದಲ್ಲಿ ಅನೇಕ ಹಿನ್ನಡೆಗಳನ್ನು ಎದುರಿಸಿ ಆತ್ಮ ವಿಶ್ವಾಸ ಹೆಚ್ಚಿಸುವಂತೆ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರಲ್ಲಿ ಧನಾತ್ಮಕತೆಯನ್ನು ರೂಪಿಸಿದಲ್ಲಿ ಯುವಕರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ.

ಯುವಕರ ಪ್ರಮುಖ ಸಮಸ್ಯೆಗಳು:
ಬಹುತೇಕ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಲಾಗಿ ಭಾರತವು ಹೆಚ್ಚಿನ ಸಂಖ್ಯೆಯು ಯುವಕರನ್ನು ಹೊಂದಿದೆ. ಆದ್ದರಿಂದ ಅವರ ಸರಿಯಾದ ಅಭಿವೃದ್ಧಿ ಮತ್ತು ಯಶಸ್ಸಿಗೆ ಸರಿಯಾದ ಯೋಜನೆ ಮತ್ತು ನಿರ್ಧಾರ ಇರುವುದು ಅವಶ್ಯ. ಆದರೆ ದುರದೃಷ್ಟವಶಾತ್ ದೇಶದ ಯುವಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಅನೇಕ ಯುವಕರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗಿಲ್ಲ.
ಬಡತನ ಮತ್ತು ನಿರುದ್ಯೋಗ ಹಾಗೂ ಅನಕ್ಷರಸ್ಥ ಪೋಷಕರ ಕಾರಣದಿಂದ ಅನೇಕ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ಮಗುವಿಗೆ ಶಾಲೆಗೆ ಹೋಗಲು ಮತ್ತು ಉನ್ನತ ಶಿಕ್ಷಣ ಪಡೆಯಲು ಅವಕಾಶ ಸಿಗುವಂತೆ ಮಾಡಬೇಕು. ಜೊತೆಗೆ ಉನ್ನತ ಶಿಕ್ಷಣದ ವೆಚ್ಚವನ್ನು ಸಾಧ್ಯವಿದ್ದಷ್ಟು ಕಡಿಮೆಗೊಳಿಸಿದಾಗ ಎಲ್ಲ ಯುವಕರು ಉನ್ನತ ಶಿಕ್ಷಣ ಪಡೆಯುವ ಸಾಧ್ಯ. ಹಾಗೂ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣವನ್ನು ನೀಡಿದಾಗ ಅವರಲ್ಲಿ ಉದ್ಯೋಗಾತ್ಮಕ ಕೌಶಲ್ಯಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಲ್ಲಿನ ಅಂಶಗಳು ಸಹಕಾರಿಯಾಗಲಿವೆ.
ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸುವುದು ಅವಶ್ಯಕ ಏಕೆಂದರೆ ದೇಶದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಓದುವದರಿಂದ ವಂಚಿತರಾಗಿದ್ದಾರೆ. ಹುಡುಗಿಯರು ಕೂಡ ಯುವ ಜನತೆಯ ಭಾಗ ಜೊತೆಗೆ ಸಮಾಜದ ಭಾಗ. ಆದ್ದರಿಂದ ಸಮಾಜದ ಒಂದು ವರ್ಗವನ್ನು ನಿರ್ಲಕ್ಷಿಸಿದಾಗ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ‘ಬೇಟಿ ಬಚಾವು ಬೇಟಿ ಪಡಾವೋ’ ‘ಸಬಕ್ ಸಾಥ್ ಸಬಕಾ ವಿಕಾಸ್‌’ ದಂತಹ ಯೋಜನೆಗಳು ಸಹಾಯಕರಿಯಾದರೂ ಕೂಡ ಫಲಿತಾಂಶ ಅಷ್ಟೊಂದು ಪೂರಕವಾಗಿಲ್ಲ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

ದೇಶದಲ್ಲಿರುವ ಅಸಮಾನತೆಯನ್ನು ಹೊಡೆದು ಹಾಕಿ ಯುವಕರಿಗೆ ಕೌಶಲ್ಯಗಳ ಕುರಿತು ತರಬೇತಿ ನೀಡಿ ಉದ್ಯೋಗ ಮಾರುಕಟ್ಟೆಗೆ ಸಿದ್ಧಪಡಿಸುವ ಕಾರ‍್ಯಕ್ಕಾಗಿ ಈಗಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ಪ್ರೌಢಾವಸ್ಥೆಯ ಜೀವನದ ಅವಧಿಯಾಗಿದ್ದು, ಅದು ಶಕ್ತಿ ಮತ್ತು ತನಗಾಗಿ ಏನನ್ನಾದರೂ ಮಾಡುವ ಪ್ರಜ್ಞೆಯನ್ನು ತುಂಬುತ್ತದೆ. ಯುವಕರು ಯಾವುದೇ ಅಭಿಪ್ರಾಯಗಳು ಮತ್ತು ಸನ್ನಿವೇಶಗಳಿಗೆ ವಿಭಿನ್ನ ವಿಧಾನವನ್ನು ಹೊಂದಿದ್ದಾರೆ. ಇಂದು ಪ್ರತಿಯೊಬ್ಬ ಯುವಕನು ದೇಶಕ್ಕಾಗಿ ಏನನ್ನಾದರೂ ಮಾಡಲು ಉತ್ಸುಕನಾದ ಕಾರಣದಿಂದ ಹಿರಿಯರು ಯುವಕರಿಗೆ ಸರಿಯಾದ ದಿಸೆಯಲ್ಲಿ ಸಾಗಲು ಮಾರ್ಗದರ್ಶನ ಮಾಡುವ ಮೂಲಕ ದೇಶ ಹಾಗೂ ವಿದೇಶಗಳಲ್ಲಿ ಭಾರತ ಮಾತೆಯ ಪ್ರತಿಷ್ಠೆಯನ್ನು ಹೆಚ್ಚಿಸಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಕರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಯುವಕರು ಅವುಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು.
ನಮ್ಮ ರಾಷ್ಟ್ರದ ನವಚೇತನವಾಗಿದ್ದ ಸ್ವಾಮಿ ವಿವೇಕಾನಂದರು ನಮ್ಮ ಯುವ ಜನಾಂಗಕ್ಕೊಂದು ಪ್ರೇರಣಾ ಸೂತ್ರ. ಅವರೂ ಕೂಡ ಯುವಶಕ್ತಿಯ ಅಗಾಧತೆಯನ್ನು ಅರಿತು ‘ಎದ್ದೇಳಿ ಯುವಕರೇ ನಿಮ್ಮ ಗುರಿ ತಲುಪುವವರೆಗೂ ಎಲ್ಲಿಯೂ ನಿಲ್ಲದಿರಿ’ ಎಂದು ಹೇಳಿದ್ದರು. ಅಂತೆಯೇ ಯುವಕರೇ ನಮ್ಮ ದೇಶದ ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುವವರಾಗಿದ್ದಾರೆ.
– ಡಾ.ಬಿ.ಎಸ್.ಮಾಳವಾಡ, ನಿವೃತ್ತ ಗ್ರಂಥಪಾಲಕರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement