ಚಿಕ್ಕಬಳ್ಳಾಪುರ : ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್‌ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ

ಬೆಂಗಳೂರು: ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದ ಬಳಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡುವ ಸಂಬಂಧ ಜನವರಿ 15ರಂದು ಆಯೋಜಿಸಿರುವ ಕಾರ್ಯಕ್ರಮ ನಡೆಸಲು ಇಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಶಾ ಯೋಗ ಕೇಂದ್ರದ ಮನವಿಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ನಡೆಸಿತು.
ಗಣ್ಯರನ್ನು ಈಗಾಗಲೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಅಗತ್ಯ ಇರುವುದನ್ನು ಹೊರತುಪಡಿಸಿ ಯಾವುದೇ ತೆರನಾದ ಅರಣ್ಯ ಹಾನಿ ಅಥವಾ ನಿರ್ಮಾಣ ಕಾಮಗಾರಿ ನಡೆಸುವುದಿಲ್ಲ ಎಂಬ ವಾಗ್ದಾನವನ್ನು ಇಶಾ ಯೋಗ ಕೇಂದ್ರ ನೀಡಿದೆ. ಅರ್ಜಿಯ ಅರ್ಹತೆಯ ಬಗ್ಗೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಆಕ್ಷೇಪಣೆಯನ್ನು ನ್ಯಾಯಾಲಯವು ಪರಿಗಣಿಸಿಲ್ಲ. ಇಶಾ ಯೋಗ ಕೇಂದ್ರದ ಕಾರ್ಯಕ್ರಮದ ತುರ್ತನ್ನು ಪರಿಗಣಿಸಿ ಜನವರಿ 11ರಂದು ಮಾಡಿರುವ ಆದೇಶವು ಜನವರಿ 15ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಉಳಿದಂತೆ ಯಥಾಸ್ಥಿತಿ ಕಾಪಾಡುವಂತೆ ಮಾಡಿರುವ ಆದೇಶವು ಮುಂದಿನ ವಿಚಾರಣೆಯವರೆಗೆ ಮುಂದುವರಿಯಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಫೆಬ್ರವರಿ 2ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಇಶಾ ಯೋಗ ಕೇಂದ್ರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಹಾಗೂ ವಕೀಲ ಪಿ ಎನ್‌ ಮನಮೋಹನ್‌ ಅವರು “ಅರ್ಜಿದಾರರು ನೈಜ ವಿಚಾರಗಳನ್ನು ಮರೆಮಾಚಿದ್ದಾರೆ. ಆದಿಯೋಗಿ ಮೂರ್ತಿಯು ಆರೋಪಿಸಿರುವ ಸ್ಥಳದಿಂದ 31 ಕಿಮೀ ದೂರದಲ್ಲಿದೆ. ಜನವರಿ 15ರಂದು ಕಾರ್ಯಕ್ರಮ ನಡೆಸಲು ಈ ಹಿಂದೆಯೇ ನಿರ್ಣಯಿಸಲಾಗಿದೆ. ಕಾರ್ಯಕ್ರಮದಲ್ಲಿ ಅತ್ಯುನ್ನತ ಗಣ್ಯರು ಭಾಗವಹಿಸುತ್ತಿದ್ದು, ಅವರ ಅನುಕೂಲ ಆಧರಿಸಿ ಕಾರ್ಯಕ್ರಮ ನಿಯೋಜಿಸಲಾಗಿದೆ. ಪಿಐಎಲ್‌ ಸಲ್ಲಿಕೆಗೂ ಮುನ್ನವೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಣ್ಯರ ಅನುಮತಿ ಮತ್ತು ಒಪ್ಪಿಗೆ ಪಡೆಯಲಾಗಿದೆ” ಎಂದು ಪೀಠಕ್ಕೆ ತಿಳಿಸಿದರು.
ಇದನ್ನು ಆಲಿಸಿದ ಪೀಠವು “ಕೆಲವು ವಿಚಾರಗಳನ್ನು ಪರಿಗಣಿಸಬೇಕಿದೆ. ಉಪರಾಷ್ಟ್ರಪತಿ ಸೇರಿದಂತೆ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ತಾವು ತಿಳಿಸಿದ್ದೀರಿ. ನಿಯೋಜಿತವಾಗಿರುವಂತೆ ಕಾರ್ಯಕ್ರಮ ನಡೆಯುವುದಕ್ಕೆ ನಾವು ಅನುಮತಿ ನೀಡುತ್ತೇವೆ. ಇದಕ್ಕೆ ಕಳೆದ ವಿಚಾರಣೆಯಲ್ಲಿ ಮಾಡಿರುವ ಯಥಾಸ್ಥಿತಿ ಕಾಪಾಡುವ ಆದೇಶ ಅನ್ವಯಿಸುವುದಿಲ್ಲ. ಉಳಿದಂತೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement