ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಅಟ್ಟೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮಂಪರು ಔಷಧ ನಾಟಿದ್ದ ಸುಮಾರು 20 ವರ್ಷದ ಕಾಡಾನೆ 35 ಅಡಿ ಆಳದ ಗುಂಡಿಗೆ ಬಿದ್ದು ಮೃತಪಟ್ಟಿದೆ.
ಈ ಪ್ರದೇಶದಲ್ಲಿ ಜನರಿಗೆ ಭಾರೀ ತೊಂದರೆ ನೀಡಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಮಂಪರು ಔಷಧ ನಾಟಿದ ನಂತರ ಅಡ್ಡಾದಿಡ್ಡಿ ಓಡಾಡಲು ಆರಂಭಿಸಿದ ಕಾಡಾನೆ ಆಕಸ್ಮಿಕವಾಗಿ ಕಡಿದಾದ ಸಿಮೆಂಟ್ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿತು, ನಂತರ ಸ್ಥಳದಲ್ಲೇ ಮೃತಪಟ್ಟಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ಬಲಗಣ್ಣು ದೃಷ್ಟಿ ಕಳೆದುಕೊಂಡಿತ್ತು. ಹೀಗಾಗಿ ಅದಕ್ಕೆ ಆಳದ ಗುಂಡಿ ಕಾಣಿಸಿರಲಿಕ್ಕಿಲ್ಲ ಎನಿಸುತ್ತದೆ ಎಂದು ಹೇಳಲಾಗಿದೆ.
ಅಟ್ಟೂರು-ನಲ್ಲೂರು ಮತ್ತು ಮೊದೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಇದೇ ಕಾಡಾನೆ ಗ್ರಾಮಸ್ಥರ ಮೇಲೆ ದಾಳಿ ನಡೆಸಿತ್ತು. ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುತ್ತಿದ್ದರು. ಅಟ್ಟೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆ ಕಾಣಿಸಿದಾಗ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಇಂಜೆಕ್ಷನ್ ನಾಟಿದ ತಕ್ಷಣ 500 ಮೀಟರಿನಷ್ಟು ದೂರಕ್ಕೆ ಅಡ್ಡಾದಿಡ್ಡಿ ಓಡಿದ ಆನೆಯು ಕಾಫಿ ಒಣಗಿಸಲೆಂದು ನಿರ್ಮಿಸಿದ್ದ ಸಿಮೆಂಟ್ ಕಣಕ್ಕೆ ಉರುಳಿ ಬಿದ್ದಿತ್ತು.
ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪಶುವೈದ್ಯರಾದ ಡಾ ಚಿಟ್ಟಿಯಪ್ಪ ಮತ್ತು ಡಾ ರಮೇಶ್ ಗ್ಲೂಕೋಸ್ ಮತ್ತು ಇತರ ಔಷಗಳನ್ನು ನೀಡಿದರೂ ಪ್ರಯೋಜನವಾಗದೆ ಆನೆ ಮೃತಪಟ್ಟಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ