ಕಾಂಗ್ರೆಸ್‌ ನ ‘ನಾ ನಾಯಕಿ’ ಸಮಾವೇಶಕ್ಕೆ ಬಂದವರಿಗೆ ಹಣ ನೀಡಲಾಗಿದೆ : ಬಿಜೆಪಿ ಆರೋಪ ; ವೀಡಿಯೊ ಟ್ವೀಟ್‌

ಬೆಂಗಳೂರು: ನಗರದ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಇಂದು, ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶದಲ್ಲಿ ಭಾಗವಹಿಸಲು ಬಂದವರಿಗೆ ಹಣ ನೀಡಲಾಗಿತ್ತು ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ? ‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು ! ಪ್ರಿಯಾಂಕಾ ಗಾಂಧಿ ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮೀ ಯೋಜನೆ ಇರಬೇಕು’ ಎಂದು ಉಲ್ಲೇಖಿಸಿ ಲೇವಡಿ ಮಾಡಿದೆ. ಅಲ್ಲದೆ, ತನ್ನ ಆರೋಪಕ್ಕೆ ವೀಡಿಯೊ ತುಣುಕನ್ನು ಲಗತ್ತಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಯ ಮಹಿಳೆಯರಿಗೆ ಬೇಷರತ್ತಾಗಿ 2,000 ರೂ. ನೀಡಲಾಗುವುದು. ಈ ನಿಟ್ಟಿನಲ್ಲಿ ಗೃಹಲಕ್ಷ್ಮೀ ಹೆಸರಿನ ಯೋಜನೆ ರೂಪಿಸಲಾಗುವುದು ಎಂದು ‘ನಾ ನಾಯಕಿ’ ಸಮಾವೇಶದಲ್ಲಿ ಪ್ರಯಾಂಕಾ ಗಾಂಧಿ ವಾದ್ರಾ ಸಮ್ಮುಖದಲ್ಲಿ ಕಾಂಗ್ರೆಸ್‌ ಘೋಷಿಸಿತ್ತು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿತ್ತು, ಕಾಂಗ್ರೆಸ್‌ನ ನಾ ನಾಯಕಿ ಸಮಾವೇಶದ ವೀಡಿಯೊ ಬಿಡುಗಡೆ ಮಾಡಿರುವ ಬಿಜೆಪಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ಕಾಂಗ್ರೆಸ್ ಅನ್ನು ಲೇವಡಿ ಮಾಡಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಸಚಿವ ಸುಧಾಕರ ಲೇವಡಿ…
ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಯವರು ಹೋದ ಕಡೆಗಳಲ್ಲಿ ಆ ಪಕ್ಷಕ್ಕೆ ಸೀಟುಗಳು ಬರುವುದಿಲ್ಲ. ರಾಜ್ಯಕ್ಕೆ ಅವರು ಬರದೇ ಇದ್ದಲ್ಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ಸೀಟುಗಳನ್ನಾದರೂ ಪಡೆಯುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಗೇಲಿ ಮಾಡಿದ್ದಾರೆ.
ನೆಲಮಂಗಲದಲ್ಲಿ ಸೋಮವಾರ ತಾಲೂಕು ನೂತನ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶಕ್ಕೆ ಹೋಗದೇ ಇದ್ದಿದ್ದರೆ ಆ ಪಕ್ಷಕ್ಕೆ ಸ್ವಲ್ಪ ಸೀಟುಗಳು ಬರುತ್ತಿತ್ತು. ಅವರು ಅಲ್ಲಿಗೆ ಹೋಗಿದ್ದರಿಂದಲೇ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಟೀಕಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement