ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಂಕಿ: ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದ ಭಕ್ತ ಸಾವು

ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಬಳಿ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬೆಂಕಿ ಬಿದ್ದು ಪಾದಯಾತ್ರೆ ಮೂಲಕ ಬೆಟ್ಟ ಹತ್ತುತ್ತಿದ್ದ ವ್ಯಕ್ತಿಯೊಬ್ಬರು ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಬಳಿಯ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಘಟನೆ ನಡೆದಿದ್ದು, ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಮೃತರನ್ನು ಬೆಂಗಳೂರಿನ ಅನಂತಕುಮಾರ (55) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.ಬೆಟ್ಟದಲ್ಲಿ ಬೆಳೆದ ಹುಲ್ಲುಗಾವಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ನಂತರ ಗಾಳಿಗೆ ಬೆಂಕಿ ವೇಗವಾಗಿ ಹರಡಿಕೊಂಡಿದೆ. ಅದೇ ಸಮಯದಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಆರು ಜನರು ಒಟ್ಟಾಗಿ ಬೆಟ್ಟವನ್ನು ಹತ್ತುತ್ತಿರುವ ಸಂದರ್ಭದಲ್ಲಿ ಬೆಂಕಿ ವ್ಯಾಪಿಸಿದೆ. ಉಳಿದ ಐವರು ಪಾದಯಾತ್ರಿಗಳು ಓಡಿ ತಪ್ಪಿಸಿಕೊಂಡಿದ್ದಾರೆ, ಆದರೆ ಸ್ವಲ್ಪ ದಪ್ಪಗಿದ್ದ ಬೆಂಗಳೂರಿನ ನಿವಾಸಿ ಅನಂತಕುಮಾರ ಅವರು ಓಡಲಾಗದೇ ಬೆಂಕಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಐದಾರು ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನಲಾಗಿದೆ. ಹೊನ್ನವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement