ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ಹಸ್ತಾಂತರ

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ ವಿರುದ್ಧದ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ.
ಸ್ಯಾಂಟ್ರೋ ರವಿ ವಿರುದ್ದದ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.
ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು ಎಲ್ಲ ಅಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಂಚನೆಗೆ ಸಂಬಂಧಿಸಿದಂತೆ ಪತ್ನಿ ನೀಡಿದ ದೂರು ಹಾಗೂ ಇನ್ನಿತರ ಆರೋಪಗಳು ಸೇರಿದಂತೆ ಎಲ್ಲವನ್ನೂ ಕ್ರೋಢೀಕರಿಸಿ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿ ವಿರುದ್ಧ ತನಿಖೆ ನಡೆಸಲಿದ್ದಾರೆ. ವಂಚನೆ ಸಂಬಂಧಿಸಿದಂತೆ ಪತ್ನಿ ನೀಡಿದ ದೂರಿನ ಬೆನ್ನಲ್ಲೇ ಒಂದರಿಂದ ಒಂದರಂತೆ ಆರೋಪಗಳು ಕೇಳಿಬಂದ ಬಳಿಕ ಬಂಧನ ಭೀತಿಯಿಂದ ಗುಜರಾತ್‌ನ ಅಹಮದಾಬಾದಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಜನವರಿ ೧೩ರಂದು ರಾಜ್ಯ ಪೊಲೀಸರು ಪತ್ತೆ ಮಾಡಿ ಬಂಧಿಸಿ ಮೈಸೂರಿಗೆ ಕರೆತಂದಿದ್ದರು.
ಜನವರಿ ೧೪ರಂದು ಬಿಗಿ ಭದ್ರತೆಯಲ್ಲಿ ಮೈಸೂರಿನ ವಿಜಯನಗರ ಠಾಣೆಯಿಂದ ವಿವಿ ಮೊಹಲ್ಲಾದಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು, ಆರೋಪಿಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದರು.
ಈತನ ಮೇಲೆ ೧೯೯೫ರಿಂದ ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ಮಂಡ್ಯ ಮೊದಲಾದ ಕಡೆ ೨೨ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement