ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ: ಸಿಬಿಐ ತನಿಖೆಗೆ ಶಿಫಾರಸು ಮಾಡಲು ನಿರ್ಧಾರ

ಬೆಂಗಳೂರು: ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿ ಗ್ರಾಹಕರಿಗೆ ಮೋಸ ಮಾಡಿದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಬ್ಯಾಂಕ್‌ ಅವ್ಯವಹಾರ ಕುರಿತು ಪರಾಮರ್ಶೆ ಸಭೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ.
ವಿಕಾಸಸೌಧದಲ್ಲಿ ಮಂಗಳವಾರ (ಜನವರಿ 17) ಸಹಕಾರ ಸಚಿವ ಎಸ್.ಟಿ.ಸೋಮಶೇಖರ ನೇತೃತ್ವದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಬ್ಯಾಂಕ್‌ನ ಅವ್ಯವಹಾರಗಳ ಕುರಿತ ಚರ್ಚಿಸಲಾಗಿದ್ದು, ಈ ಕುರಿತು ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಾಡಲು ತೀರ್ಮಾನಿಸಲಾಗಿದೆ. ಶಿಫಾರಸು ಕುರಿತು ನಿರ್ಣಯ ಸಿದ್ಧಪಡಿಸಲು ಸಚಿವ ಸೋಮಶೇಖರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಠೇವಣಿದಾರರ ಹಿತ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಕುರಿತು ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲು ತೀರ್ಮಾನಿಸಲಾಗಿದೆ. ವಿಕಾಸಸೌಧದಲ್ಲಿ ನಡೆದ ಗುರುರಾಘವೇಂದ್ರ ಬ್ಯಾಂಕ್‌ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಬ್ಯಾಂಕ್‌ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ಸೌಮ್ಯಾರೆಡ್ಡಿ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಇದ್ದರು.
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಬಹುಕೋಟಿ ಅವ್ಯವಹಾರ ಎದುರಿಸುತ್ತಿತ್ತು. ಇ.ಡಿ. ತನಿಖೆ ವೇಳೆ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿತ್ತು. ನಕಲಿ ದಾಖಲೆಗಳ ಅಧಾರದ ಮೇಲೆ 892.85 ಕೋಟಿ ರೂ. ಸಾಲ ಕೊಟ್ಟಿರುವುದು ತನಿಖೆಯಲ್ಲಿ ಹೊರಬಿದ್ದಿತ್ತು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement