ಸಹಕಾರಿ ಧುರೀಣ, ಸಾಗರ ಕ್ಷೇತ್ರದ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ

ಸಾಗರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್​.ಟಿ. ತಿಮ್ಮಪ್ಪ ಹೆಗಡೆ (94) ಇಂದು, ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗದಹಳ್ಳಿ ಬಳಿಯ ಮಡಸೂರು ಗ್ರಾಮದಲ್ಲಿ ಇಂದು, ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ತಿಮ್ಮಪ್ಪ ಅವರ ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.ಎಲ್​.ಟಿ. ತಿಮ್ಮಪ್ಪ ಹೆಗಡೆ ಅವರು 1978 ಹಾಗೂ 1983ರ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1978 ರಲ್ಲಿ ಜನತಾ ಪಕ್ಷದಿಂದ ಸ್ಫರ್ಧಿಸಿದ್ದ ಕಾಗೋಡು ತಿಮ್ಮಪ್ಪ ವಿರುದ್ಧ ಕಾಂಗ್ರೆಸ್​ನಿಂದ ಸ್ಫರ್ಧಿಸಿ ತಿಮ್ಮಪ್ಪ ಹೆಗಡೆ ಗೆದ್ದಿದ್ದರು.
ಇವರು ಸಾಗರ ಪ್ರಾಂತ್ಯದಲ್ಲಿ ಅಡಿಕೆ ಬೆಳೆಗಾರರ ಸಂಘ ಸ್ಥಾಪನೆ, ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೋ, ಸಾಗರದ ಆಪ್ಸ್‌ಕೋಸ್‌ನಂತಹ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಸಾಗರದ ಆಪ್ಸ್‌ಕೋಸ್, ತೋಟಗಾರ್ಸ್, ಅಡಿಕೆ ಬೆಳೆಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿ ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅಲ್ಲದೆ, ಹೊಸ ನಗರದ ರಾಮಚಂದ್ರಾಪುರ ಮಟದ ಚುಟವಟಿಕೆಗಳಲ್ಲಿ ಮಂಚೂಣಿಯಲ್ಲಿದ್ದರು. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣ ಸಮಿತಿ ಅಧ್ಯಕ್ಷರಾಗಿ ಏಪ್ರಿಲ್ ೧೯೯೯ ರಲ್ಲಿ ಆ ಸಮಾರಂಭವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಟ್ಟಿಯಂಗಡಿಯ ಸಿದ್ಧಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ಧಿ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಅಲ್ಲಿನ ಗಣಪತಿ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದರು. ಸಾಗರದ ಶಿಕ್ಷಣ ಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್‌ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಸಂಸ್ಥೆಯ ಉಪಾಧ್ಯಕ್ಷರಾಗಿ ಬಹುಕಾಲ ನಿರ್ವಹಿಸಿದರು. ಕೇಂದ್ರ ಸಾಂಬಾರು ಮಂಡಳಿಯ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿ, ಲ್ಯಾಂಡ್ ಗ್ರಾಂಟ್ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ಸಹೋದರ ಗಣಪತಿ ಹೆಗಡೆ, ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ ಹಾಗೂ ಅಶೋಕ,  ಸೇರಿದಂತೆ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement