ನಿರೀಕ್ಷಿಸಿರಲಿಲ್ಲ, ಪದ್ಮವಿಭೂಷಣ ನನಗೆ ಬಯಸದೆ ಬಂದ ಭಾಗ್ಯ, ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುವೆ : ಎಸ್.ಎಂ.ಕೃಷ್ಣ

ಬೆಂಗಳೂರು: ನನಗೆ ನಿಜವಾಗಿಯೂ ಸಂತೋಷವಾಗಿದೆ. ನನಗೆ ಈ ದೊಡ್ಡ ಗೌರವವನ್ನು ನೀಡಿದ ಪ್ರಧಾನಿ ಮೋದಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆ ಎಂದು ಎಸ್‌ಎಂ ಕೃಷ್ಣ ಹೇಳಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಅವರಿಗೆ ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಾರ್ವಜನಿಕ ಕ್ಷೇತ್ರದಲ್ಲಿ ನನ್ನ ಸುದೀರ್ಘ ಸೇವೆ ಗುರತಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ. ಇದಕ್ಕೆ ಕರ್ನಾಟಕದ ಜನತೆ ನನಗೆ ನೀಡಿದ ಪ್ರೀತಿಯೇ ಕಾರಣ. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆ ಎಂದು ಎಸ್‌ಎಂ ಕೃಷ್ಣ ಹೇಳಿದ್ದಾರೆ.
ಜನರ ಆಶೀರ್ವಾದಿಂದ ಸಿಕ್ಕ ಅಧಿಕಾರವನ್ನು ಜನರಿಗಾಗಿ ಅಷ್ಟೋ ಇಷ್ಟೋ ಕೆಲಸ ಮಾಡಿರುವ ತೃಪ್ತಿ ನನಗಿದೆ. ಕೇಂದ್ರ ಸರ್ಕಾರ ನನ್ನ ಅಲ್ಪ ಸೇವೆಯನ್ನು ಗುರುತಿಸಿ ಅತ್ಯುನ್ನತ ಎರಡನೇ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ನನಗೆ ಸಂತಸ ತಂದಿದೆ. ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ. ನಾನು ಈಗಾಗಲೇ ಘೋಷಣೆ ಮಾಡಿರುವಂತೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ನಿವೃತ್ತಿ ಘೋಷಣೆ ಬೆನ್ನಿಗೇ ಈ ಪ್ರಶಸ್ತಿ ಘೋಷಣೆಯಾಗಿದೆ. ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಅನೇಕರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಮಸ್ತ ಏಳೂವರೆ ಕೋಟಿ ಕನ್ನಡಿಗರಿಗೆ ಸಿಕ್ಕ ಗೌರವ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮಾರ್ಚ್‌ 31ರೊಳಗೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಬದಲಾವಣೆ ಮಾಡಿ : ಬಿಜೆಪಿ ಹೈಕಮಾಂಡಿಗೆ ಮಠಾಧೀಶರ ಗಡುವು

ರಾಜಕಾರಣಿಯಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಎಸ್ ಎಂ ಕೃಷ್ಣ ಅವರು 1999ರಿಂದ 2004ರ ವರೆಗೆ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇತ್ತೀಚಿಗಷ್ಟೇ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು. ನಿವೃತ್ತಿ ಬೆನ್ನಲ್ಲೇ ಕೇಂದ್ರ ಸರ್ಕಾರ ಎಸ್‌.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕಕ್ಕೆ ಒಟ್ಟು ಎಂಟು ಪದ್ಮ ಪ್ರಶಸ್ತಿಗಳು ಬಂದಿದ್ದು, ಎಸ್‌.ಎಂ.ಕೃಷ್ಣ ಅವರಿಗೆ ಪದ್ಮ ವಿಭೂಷಣ, ಸಾಹಿತಿ ಎಸ್‌.ಎಲ್‌.ಭೈರಪ್ಪ ಹಾಗೂ ಡಾ.ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರ), ಕೊಡಗಿನ ರಾಣಿ ಮಾಚಯ್ಯ (ಜಾನಪದ -ನೃತ್ಯ), ಚಿಕ್ಕಬಳ್ಳಾಪುರದ ಮುನಿ ವೆಂಕಟಪ್ಪ (ಜಾನಪದ ಸಾಹಿತ್ಯ-ತಮಟೆ ವಾದ್ಯ), ಬೀದರಿನ ರಶೀದ್ ಅಹ್ಮದ್ ಕ್ವಾದ್ರಿ (ಕಲೆ), ಮೈಸೂರಿನ ಎಸ್ ಸುಬ್ಬರಾಮನ್ (ಪುರಾತತ್ವ) ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement