ಎರಡು ಜೊತೆ ಸಮವಸ್ತ್ರ ನೀಡದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ತೀವ್ರ ವಾಗ್ದಾಳಿ ನಡೆಸಿದೆ.
ಸರ್ಕಾರಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, 1 ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿ ಕೊಪ್ಪಳದ ಮಾ.ಮಂಜುನಾಥ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅಧಿಕಾರಿಗಳಿಗೆ ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಮಾನವೀಯತೆ ತೋರುತ್ತಿಲ್ಲ. ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಇಂತಹ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಎರಡು ಜತೆ ಸಮವಸ್ತ್ರ ಒದಗಿಸಬೇಕು ಎಂದು ಸೂಚಿಸಿತು. ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ.
2019ರ ಆಗಸ್ಟ್‌ 28ರಂದು ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ನ್ಯಾಯಯುತ ನೆಲೆಯಲ್ಲಿ ಜಾರಿಗೊಳಿಸುವುದರ ಸಂಬಂಧ ವಿಸ್ತೃತ ಅಫಿಡವಿಟ್‌ ಅನ್ನು ರಾಜ್ಯ ಸರ್ಕಾರ ಸಲ್ಲಿಸಬೇಕು. ಆರ್‌ಟಿಇ ಕಾಯಿದೆ ಸೆಕ್ಷನ್‌ 3ರ ಅಡಿ ತನ್ನ ಕರ್ತವ್ಯವನ್ನು ತುರ್ತಾಗಿ ರಾಜ್ಯ ಸರ್ಕಾರ ನಿಭಾಯಿಸಬೇಕಿದೆ. ಅಲ್ಲದೇ, ಕಾಯಿದೆಯ ಸೆಕ್ಷನ್‌ 3, ಸಂವಿಧಾನದ 21ಎ, 25ನೇ ವಿಧಿ ಅಡಿ 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಸಾಂಸ್ಥಿಕ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ತುರ್ತಾಗಿನಿಭಾಯಿಸಬೇಕು. ಅಂತಿಮವಾಗಿ ಇದಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗುತ್ತಿದ್ದು, ಸಂಬಂಧಿತ ಅಧಿಕಾರಿಯ ವಿರುದ್ಧ ಆರೋಪ ನಿಗದಿ ಮಾಡಲಾಗುತ್ತದೆ. ಅಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಇದಕ್ಕೂ ಮುನ್ನ ಪೀಠವು “ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಸಮವಸ್ತ್ರ, ಶೂ ಹಾಗೂ ಕಾಲು ಚೀಲ ವಿತರಿಸಲು ಹೇಳಿ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ಲವೇ? ಏನೇನಕ್ಕೋ ಕೋಟಿ ಗಟ್ಟಲೇ ಖರ್ಚು ಮಾಡುತ್ತೀರಿ. ಮಕ್ಕಳ ಹಕ್ಕು, ಶಿಕ್ಷಣ ವಿಚಾರದಲ್ಲಿ ನಾವು ಇದನ್ನು ಸಹಿಸುವುದಿಲ್ಲ. ಇದನ್ನು ನೋಡಿದರೆ ನಮಗೆ ನೋವಾಗುತ್ತದೆ. ಸಮವಸ್ತ್ರ ಕೊಟ್ಟರೆ ಕೊಡಿ, ಇಲ್ಲ ಆಗಲ್ಲ ಎಂದು ಹೇಳಿ. ನ್ಯಾಯಾಲಯದ ಆದೇಶವನ್ನು ನೀವು (ಸರ್ಕಾರ) ಪ್ರಶ್ನಿಸಬೇಕು. ಸಾಂವಿಧಾನಿಕ ಹೊಣೆಗಾರಿಕೆ, ಆರ್‌ಟಿಇ ಕಾಯಿದೆ ಜಾರಿ ಮಾಡಲ್ಲ ಎಂದು ಅಫಿಡವಿಟ್‌ ಹಾಕಿ. ಇದು ದುರದೃಷ್ಟಕರ” ಎಂದು ಪೀಠವು ಮೌಖಿಕವಾಗಿ ಹೇಳಿತು ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement