ಉಡುಪಿಯಲ್ಲಿ ಫೆಬ್ರವರಿ 11, 12ರಂದು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ, 1300 ಕಲಾವಿದರು ಭಾಗಿ

ಕುಮಟಾ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಫೆಬ್ರವರಿ 11ಮತ್ತು 12ರಂದು ಉಡುಪಿಯ ಎ. ಎಲ್. ಎಂ ಕಾಲೇಜಿನ ಎ. ಎಲ್. ಎನ್. ರಾವ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್‌.ಹೆಗಡೆ ತಿಳಿಸಿದ್ದಾರೆ.
ಕುಮಟಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲಕುಮಾರ ಪಾಲ್ಗೊಳ್ಳಲಿದ್ದಾರೆ. ರಾಜ್ಯದ 32 ಯಕ್ಷಗಾನ ತಂಡಗಳು ಭಾಗವಹಿಸಲಿದ್ದು ಯಕ್ಷಗಾನಕ್ಕಾಗಿ ದುಡಿದ 75 ಹಿಡಿಯ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಗುತ್ತದೆ ಎಂದರು.
ಯಕ್ಷಗಾನ ಕರ್ನಾಟಕದ ಕಲೆಯಾಗಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇದು ಜನಮಾನದಲ್ಲಿ ಹಾಸುಹೊಕ್ಕಾಗಿದೆ. ಸಾವಿರಾರು ಕುಟುಂಬಕ್ಕೆ ಯಕ್ಷಗಾನ ಕಲೆ ಆಶ್ರಯ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಡುಪಿ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು ರಾಜ್ಯ ಸರ್ಕಾರ 2 ಕೋಟಿ ರೂ.ಗಳನ್ನು ನೀಡಿದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಸಮ್ಮೇಳನದಲ್ಲಿ 200 ಗಣ್ಯರಿಗೆ ವಿಶೇಷ ಆಮಂತ್ರಣ ನೀಡಲಾಗಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ 1300 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡವೂ ಪ್ರದರ್ಶನ ನೀಡಲಿದೆ. ಪ್ರಮುಖವಾಗಿ 6 ಗೋಷ್ಠಿಗಳು ನಡೆಯಲಿದೆ. ಮಲ್ಪೆ ಶಂಕರ ನಾರಾಯಣ ಸಾಮಗ. ಕೆರೆಮನೆ ಶಂಭು ಹೆಗಡೆ ಹಾಗೂ ಅಳಿಕೆ ರಾಮಯ್ಯ ರೈ ಹೆಸರಿನ ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಡಿಯಾಳ ದೇವಾಲಯದಿಂದ ಸಮ್ಮೇಳನ ವೇದಿಕೆಗೆ ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಶಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆಂಗಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲಕುಮಾರ, ಶಾಸರಾದ ಕೆ. ರಘುಪತಿ ಭಟ್ಟ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಸಂತ ಭಟ್‌ ಹಾಗೂ ಮಂಜುನಾಥ ಭಟ್‌ ಸ್ವರ್ಣಗದ್ದೆ ಉಪಸ್ಥಿತರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement