
ರಾಯಚೂರು: ಪತ್ನಿಯ ಅನೈತಿಕ ಸಂಬಂಧ ಶಂಕಿಸಿ ತನ್ನಿಬ್ಬರು ಪುಟ್ಟ ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ಜಿಲ್ಲೆಯ ದೇವದುರ್ಗ ಪುರಸಭೆ ವ್ಯಾಪ್ತಿಯ ಜಕ್ಲೇರದೊಡ್ಡಿಯಲ್ಲಿ ಶನಿವಾರ ತಡರಾತ್ರಿ ನಡೆದ ವರದಿಯಾಗಿದೆ.
ವರದಿ ಪ್ರಕಾರ, ನಿಂಗಯ್ಯ ಎಂಬಾತ ಮಕ್ಕಳಾದ ಶಿವರಾಜ (5), ರಾಘವೇಂದ್ರ(3) ಎಂಬ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಪತ್ನಿ ಬೇರೆ ವ್ಯಕ್ತಿ ಜತೆ ಸಂಬಂಧ ಹೊಂದಿದ್ದು, ಈ ಮಕ್ಕಳು ನನ್ನವಲ್ಲ ಎಂದು ಪದೇಪದೇ ಜಗಳವಾಡುತ್ತಿದ್ದ. ಅಲ್ಲದೇ ಹೆಂಡತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ವಿಷಯಕ್ಕೆ ಹೆದರಿ ಹೆಂಡತಿ ತವರಿಗೆ ಹೋಗಿದ್ದಳು, ಆದರೆ ಈತ ಅಜ್ಜ-ಅಜ್ಜಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ ಇಬ್ಬರು ಮಕ್ಕಳನ್ನು ಮಾತ್ರ ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ದೇವದುರ್ಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ