ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಅರವಿಂದಕುಮಾರ, ರಾಜೇಶ ಬಿಂದಾಲ್ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದಕುಮಾರ ಹಾಗೂ ರಾಜೇಶ ಬಿಂದಾಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯಾಬಲ 34ಕ್ಕೆ ಏರಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಅದು ಕಾರ್ಯ ನಿರ್ವಹಿಸಲಿದೆ.ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.
ಜನವರಿ 31ರಂದು ಈ ಇಬ್ಬರೂ ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಫೆಬ್ರವರಿ 10ರಂದು ಕೇಂದ್ರ ಸರ್ಕಾರ ಇವರ ಹೆಸರನ್ನು ಅನುಮೋದಿಸಿತ್ತು.
ನ್ಯಾಯಮೂರ್ತಿ ಅರವಿಂದಕುಮಾರ ಅವರು ಜೂನ್ 2009 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಡಿಸೆಂಬರ್ 2012ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ದೃಢೀಕರಿಸಲಾಯಿತು. ಅಕ್ಟೋಬರ್ 2021 ರಲ್ಲಿ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪದೋನ್ನತಿ ಪಡೆದರು. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಇಬ್ಬರು (ನ್ಯಾ. ಎಸ್‌ ರವೀಂದ್ರ ಭಟ್‌ ಹಾಗೂ ನ್ಯಾ. ಬಿ ವಿ ನಾಗರತ್ನ) ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿ ಅರವಿಂದಕುಮಾರ ಮೂರನೆಯವರಾಗಿದ್ದಾರೆ.
ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು ಮಾರ್ಚ್ 2006ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಂತಿಮವಾಗಿ 2021ರ ಅಕ್ಟೋಬರ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿರಿತನದ ಪ್ರಕಾರ, ನ್ಯಾ.ಬಿಂದಾಲ್ ಅವರು ದೇಶದ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲೇ ಎರಡನೇ ಅತಿ ಹಿರಿಯವರಾಗಿದ್ದಾರೆ ಎಂದು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಮಂಡಳಿಯಾದ ಕೊಲಿಜಿಯಂ ವಿವರಿಸಿತ್ತು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement