ಲೈಫ್ ಮಿಷನ್ ಹಗರಣ; ಕೇರಳ ಸಿಎಂ ಪಿಣರಾಯಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ ಬಂಧನ

ಲೈಫ್ ಮಿಷನ್ ಯೋಜನೆಯಲ್ಲಿ ವಿದೇಶಿ ಕೊಡುಗೆ (ನಿಯಮಾವಳಿ) ಕಾಯ್ದೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ತೆಗೆದುಕೊಂಡಿದೆ.
ಅವರನ್ನು ಬಂಧಿಸಿದ ಒಂದು ದಿನದ ನಂತರ, ಕೇರಳ ಸಿಎಂ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಳೆದ ಮೂರು ದಿನಗಳಿಂದ ಶಿವಶಂಕರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿತ್ತು, ಮಂಗಳವಾರ ರಾತ್ರಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಮಾಜಿ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಶಿವಶಂಕರ್ ಅವರು ಜನವರಿ 31 ರಂದು ನಿವೃತ್ತರಾಗಿದ್ದರು. ಯುಎಇ ಕಾನ್ಸುಲೇಟ್‌ಗೆ ರಾಜತಾಂತ್ರಿಕ ಬ್ಯಾಗೇಜ್‌ ಒಳಗೊಂಡ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಲೈಫ್ ಮಿಷನ್ ಯೋಜನೆಯು ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ಬಡವರಿಗೆ ಮನೆಗಳನ್ನು ಒದಗಿಸುವ ಯೋಜನೆಯಾಗಿದೆ. 2020 ರಲ್ಲಿ ಅಂದಿನ ವಡಕಂಚೇರಿ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರ ಅವರ ದೂರಿನ ಮೇರೆಗೆ ಐಪಿಸಿಯ ಸೆಕ್ಷನ್ 120 ಬಿ ಮತ್ತು 2010 ರ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (ಎಫ್‌ಸಿಆರ್‌ಎ) ಸೆಕ್ಷನ್ 35 ರ ಅಡಿಯಲ್ಲಿ ಸಿಬಿಐ ಕೊಚ್ಚಿ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಕೊಚ್ಚಿಯ ಯುನಿಟಾಕ್ ಬಿಲ್ಡರ್‌ನ ವ್ಯವಸ್ಥಾಪಕ ನಿರ್ದೇಶಕ ಈಪ್ಪನ್ ಮೊದಲ ಆರೋಪಿ ಮತ್ತು ಸೇನ್ ವೆಂಚರ್ಸ್ ಎರಡನೇ ಆರೋಪಿ.
ಲೈಫ್ ಮಿಷನ್ ಯೋಜನೆಗೆ 20 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದ್ದ ರೆಡ್ ಕ್ರೆಸೆಂಟ್ ಜೊತೆ ಮಾಡಿಕೊಂಡ ಒಪ್ಪಂದದ ಆಧಾರದ ಮೇಲೆ ಎರಡು ಕಂಪನಿಗಳು ನಿರ್ಮಾಣವನ್ನು ಕೈಗೊಂಡಿದ್ದವು.
ರೆಡ್ ಕ್ರೆಸೆಂಟ್ ಗುತ್ತಿಗೆದಾರರ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅನಿಲ್‌ ಅಕ್ಕರ ಹಾಗೂ ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದಾರೆ. ಲೈಫ್ ಮಿಷನ್ ಯೋಜನೆ, ಖಾಸಗಿ ಕಂಪನಿಗಳು ಮತ್ತು ಇತರರಿಂದ ಎಫ್‌ಸಿಆರ್‌ಎ ಉಲ್ಲಂಘನೆಯಾಗಿದೆ ಎಂದು ಅಕ್ಕರ ಆರೋಪಿಸಿದ್ದರು.
ಆಪಾದಿತ ಎಫ್‌ಸಿಆರ್‌ಎ ಉಲ್ಲಂಘನೆ ಮತ್ತು ಯೋಜನೆಯಲ್ಲಿನ ಭ್ರಷ್ಟಾಚಾರವು ಆ ಸಮಯದಲ್ಲಿ ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಯಿತು, ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಎನ್‌ಐಎ ನ್ಯಾಯಾಲಯದ ಮುಂದೆ ಯೋಜನೆ ಕಮಿಶನ್‌ ಆಗಿ 1 ಕೋಟಿ ರೂಪಾಯಿ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement