ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ಮತ್ತು ಕಾನೂನುಗಳು ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸುವ ಮೂಲಕ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ 42 ಕೇಂದ್ರ ಅಧಿನಿಯಮಗಳು ಹಾಗೂ 32 ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy) ಲೋಕಾರ್ಪಣೆ ಮಾಡಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜ ಭಾಷಾ(ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದಿಂದ ಈ ಅಧಿನಿಯಮಗಳ ಕನ್ನಡ ಆವೃತ್ತಿ ಸಿದ್ಧಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾನೂನಿನ ಅನುಷ್ಠಾನ ಮತ್ತು ಪಾಲನೆ ಮಾಡಬೇಕಾದರೆ ಅವುಗಳ ಬಗ್ಗೆ ಅರಿವು ಬಹಳ ಮುಖ್ಯ; ಹೀಗಾಗಿ ಕಾಯ್ದೆ ಮತ್ತು ಕಾನೂನುಗಳನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸಿ ಜನಸಾಮಾನ್ಯರಿಗೆ ಅರ್ಥೈಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಲಾಗಿದೆ ಎಂದು ಹೇಳಿದರು.
ಜನಸಾಮಾನ್ಯರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಲು ಹಾಗೂ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆ ಸುಗಮಗೊಳಿಸಲು ಈ ಅಧಿನಿಯಮಗಳು ಸಹಕಾರಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳನ್ನು ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳನ್ನು ಭಾಷಾಂತರಿಸುವುದಕ್ಕೆ ಕರ್ನಾಟಕದಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ಕರ್ನಾಟಕದ ನ್ಯಾಯಾಲಯಗಳಲ್ಲಿ ಕನ್ನಡದ ತೀರ್ಪುಗಳು ಹೊರಬರಲು ಹಾಗೂ ಆಡಳಿತ ವ್ಯವಹಾರಗಳಲ್ಲಿ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲೂ ಕೂಡ ಕನ್ನಡದ ಬಳಕೆ ಸಮರ್ಪಕವಾಗಿ ಆಗಬೇಕಾಗಿದೆ ಎಂದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಹಾಗೂ ರಾಜಭಾಷಾ(ವಿಧಾಯೀ) ಆಯೋಗದ ಅಧ್ಯಕ್ಷರಾದ ಜಿ.ಶ್ರೀಧರ ಮಾತನಾಡಿ, ರಾಜಭಾಷಾ(ವಿಧಾಯೀ) ಆಯೋಗವು ಈವರೆಗೆ 371 ಕೇಂದ್ರ ಮತ್ತು 219 ರಾಜ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಪ್ರಕಟಿಸಿದೆ. ಭಾರತ ಸಂವಿಧಾನವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಭಾಷೆಯಲ್ಲಿ ಭಾಷಾಂತರಿಸಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ನಮ್ಮ ಆಯೋಗಕ್ಕೆ ಸಲ್ಲುತ್ತದೆ ಎಂದರು.
ದೇಶದ ಪ್ರಮುಖ ಕಾನೂನುಗಳಾದ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ದ್ವಿಭಾಷೆಯಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಇಂಗ್ಲೀಷ್ ಕನ್ನಡ ಕಾನೂನು ಪದಕೋಶ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ತರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವತ್ಥನಾರಾಯಣ, ಶಾಸಕರಾದ ದಿನಕರಶೆಟ್ಟಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ, ರಾಜಭಾಷಾ(ವಿಧಾಯೀ) ಆಯೋಗದ ಸದಸ್ಯರು ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ