ಬೆಂಗಳೂರು: ಸಾಮಾಜಿಕ ಜಾಲತಾಣ ಮತ್ತು ಮಾಧ್ಯಗಳ ಮುಂದೆ ಜಗಳವಾಡಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರಿ ಅಧಿಕಾರಿಯ ವಿರುದ್ಧದ ಆರೋಪಕ್ಕೆ ಮಾಧ್ಯಮ ಬಳಕೆ ಮಾಡಬೇಡಿ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆಯಿದೆ ಎಂದು ಮಹಿಳಾ ಅಧಿಕಾರಿಗಳಿಗಿಬ್ಬರಿಗೂ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.
ರೋಹಿಣಿ ಸಿಂಧೂರಿ ಹಾಗೂ ಡಿ. ರೂಪಾ ಅವರಿಬ್ಬರ ಬೀದಿ ಜಗಳಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಿ. ಇದು ಅಖಿಲ ಭಾರತೀಯ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ನೀವು ನಿಮ್ಮ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಾಡಬಹುದು. ಆದರೆ ನೀವು ಮಾಧ್ಯಮಗಳ ಮುಂದೆ ಮಾಡಿದ್ದೀರಿ. ನೀವು ಇನ್ನು ಮುಂದೆ ಸಕ್ಷಮ ಪ್ರಾಧಿಕಾರಕ್ಕೆ ಹೋಗಬೇಕು. ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಸರ್ಕಾರ ತಾಕೀತು ಮಾಡಿದೆ.
ರಾಜ್ಯ ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಬಳಿಕ ಮಹಿಳಾ ಅಧಿಕಾರಿಗಳಿಗೆ ನೊಟೀಸ್ ಜಾರಿಯಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಇಬ್ಬರು ಅಧಿಕಾರಿಗಳ ಕಿತ್ತಾಟದ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಈಗಾಗಲೇ ಪ್ರಕರಣದ ಬಗ್ಗೆ ಕುರಿತು ಇಬ್ಬರೂ ಅಧಿಕಾರಿಗಳನ್ನು ಕರೆದು ಮಾತನಾಡಿದ್ದಾರೆ. ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಶಿಸ್ತು ಕಾಪಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ” ಎಂದು ತಿಳಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ