
ಬೆಂಗಳೂರು: ವಿಧಾನಸಭೆಯಲ್ಲಿ ಇದು ನನ್ನ ಕೊನೆಯ ಭಾಷಣ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ವಿಧಾನಸಭೆ ಪ್ರವೇಶಿಸುವುದಿಲ್ಲ ಎಂಬ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಭಾವುಕ ಮಾತುಗಳಿಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ತಮ್ಮ ವಿದಾಯದ ಭಾಷಣ ಮಾಡಿದ ಯಡಿಯೂರಪ್ಪ, ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ, ಹೀಗಾಗಿ ಸದನಕ್ಕೆ ಬರುವ ಪ್ರಶ್ನೆ ಇಲ್ಲ ಎಂದು ಭಾವುಕರಾಗಿ ಹೇಳಿದರು.
ಯಡಿಯೂರಪ್ಪ ಅವರು ಇದು ‘ವಿಧಾನಸಭೆಯಲ್ಲಿದು ಕೊನೆಯ ಭಾಷಣ ಎಂದು ಹೇಳುತ್ತಿದ್ದಂತೆಯೇ ಪ್ರತಿಪಕ್ಷದ ಅನೇಕರು ನೀವು ಮತ್ತೆ ಚುನಾವಣೆಗೆ ನಿಂತು ಗೆಲ್ಲಬೇಕು ಎಂದು ಘೋಷಣೆ ಕೂಗಿದರು. ನೀವು ಸದನಕ್ಕೆ ಬರಬೇಕು ನಮಗೆ ಮಾರ್ಗದರ್ಶನ ಮಾಡಬೇಕು ಎಂದರು.
ಮಾತು ಮುಂದುವರಿಸಿದ ಯಡಿಯೂರಪ್ಪ ಅವರು, ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಪಕ್ಷ ನನಗೆ ಕೊಟ್ಟ ಅವಕಾಶವನ್ನು ಯಾರಿಗೂ ಕೊಟ್ಟಿಲ್ಲ. ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಇಷ್ಟೊಂದು ಅವಕಾಶವನ್ನು ಯಾವ ಪಕ್ಷವು ಯಾರಿಗೆ ಕೊಡುತ್ತದೆ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ. ಕಾಂಗ್ರೆಸ್ ಮತ್ತೆ ವಿಪಕ್ಷ ಸ್ಥಾನದಲ್ಲೇ ಕೂಡ್ರುವುದು ಖಚಿತ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 7ನೇ ವೇತನ ಆಯೋಗ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.
ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಅನ್ನು ಶ್ಲಾಘಿಸಿದ ಅವರು ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ. ನಾನೂ ಸಹ ಹಣಕಾಸು ಸಚಿವನಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೋಢೀಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಸದೃಢವಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ದೇಶ ಸಮರ್ಥವಾಗಿ ಎದುರಿಸಿತು. ಮೋದಿಯವರ ಮಾರ್ಗದರ್ಶನದಡಿ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ಸಂಕೋಚ ಪಡುವ ಅಗತ್ಯ ಇಲ್ಲ. ನಮ್ಮ ಆಡಳಿತದ ಕಾಲದಲ್ಲಿ ರಾಜ್ಯ ವಿಕಾಸ ಹೊಂದಿದೆ ಎಂದ ಅವರು ಕೆಲವು ವಿಪಕ್ಷದವರಿಗೆ ಆರ್ಎಸ್ಎಸ್ ಚಿಂತನೆಗಳನ್ನು ವಿರೋಧಿಸಿದರೆ ಜನ ನಮ್ಮನ್ನು ಗುರುತಿಸುತ್ತಾರೆ, ಎಂಬ ವಿಪಕ್ಷದವರು ಭ್ರಮೆಯಲ್ಲಿದ್ದಾರೆ. ಆದರೆ ಜನರಿಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದರು.



ನಿಮ್ಮ ಕಾಮೆಂಟ್ ಬರೆಯಿರಿ