ಐಪಿಎಸ್‌ ಅಧಿಕಾರಿ ಡಿ. ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ

ಬೆಂಗಳೂರು: ತಮ್ಮ ವಿರುದ್ಧ ಮಾನಹಾನಿ ಮಾಡುವ ಸುದ್ದಿಗಳನ್ನು ಪ್ರಸಾರ ಮಾಡದಂತೆ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ವಿರುದ್ಧ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿರುವ ಮೊಕದ್ದಮೆಯ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಗುರುವಾರ (ಫೆಬ್ರವರಿ 23) ಆದೇಶ ಕಾಯ್ದಿರಿಸಿದೆ.
ರೋಹಿಣಿ ಸಿಂಧೂರಿ ವಕೀಲ ಚನ್ನಬಸಪ್ಪ ಎಸ್‌.ಎನ್‌. ಅವರ ಮೂಲಕ ಮಾಧ್ಯಮಗಳು ಹಾಗೂ ರೂಪಾ ಮೌದ್ಗಿಲ್‌ ಸೇರಿದಂತೆ 60 ಮಂದಿಯ ವಿರುದ್ಧ ಹೂಡಿರುವ ಮೊಕದ್ದಮೆಯ ವಿಚಾರಣೆಯನ್ನು 73ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕೆ. ಎಸ್‌. ಗಂಗಣ್ಣವರ ಅವರು ವಿಚಾರಣೆ ನಡೆಸಿದರು.
ಐಪಿಎಸ್‌ ಅಧಿಕಾರಿ ರೂಪಾ ಅವರು ರೋಹಿಣಿ ಅವರ ಮೊಬೈಲ್‌ನಲ್ಲಿದ್ದ ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ರೋಹಿಣಿ ಪರ ವಕೀಲರು ವಾದಿಸಿದರು. ಇದಕ್ಕೆ ನ್ಯಾಯಾಲಯವು ಸೂಕ್ತ ಪ್ರಾಧಿಕಾರದಲ್ಲಿ ರೂಪಾ ಅವರ ವಿರುದ್ಧ ದೂರು ನೀಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು. ಆಗ ವಕೀಲರು ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡಿ.ರೂಪಾ ಅವರು ರೋಹಿಣಿಯವರ ಖಾಸಗಿ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಅವರ ಖಾಸಗಿ ಮೊಬೈಲ್‌ ನಂಬರ್‌ ಅನ್ನು ಬಹಿರಂಗಪಡಿಸಿದ್ದಾರೆ. ಅವರ ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದು, ಕಾನೂನು ಚೌಕಟ್ಟು ಮೀರಿ ಮಾಧ್ಯಮಗಳ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಗುರುವಾರ ಫೆಬ್ರವರಿ 23ಕ್ಕೆ ಆದೇಶ ಕಾಯ್ದಿರಿಸಿದೆ.
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಕೆಲ ಐಎಎಸ್‌ ಅಧಿಕಾರಿಗಳಿಗೆ ಅವರ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಆ ಚಿತ್ರಗಳನ್ನು ಐಪಿಎಸ್‌ ಅಧಿಕಾರಿ ರೂಪ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದು, ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದರು. ರೋಹಿಣಿ ಮತ್ತು ರೂಪಾ ಅವರ ನಡುವೆ ಸಾರ್ವಜನಿಕವಾಗಿ ಪರಸ್ಪರ ದೂಷಣೆಗಳು ಆರಂಭವಾಗಿತ್ತು. ನಂತರ ರಾಜ್ಯ ಸರ್ಕಾರವು ರೋಹಿಣಿ ಸಿಂಧೂರಿ, ರೂಪಾ ಹಾಗೂ ರೂಪಾ ಅವರ ಪತಿ ಮನೀಶ್‌ ಮೌದ್ಗಿಲ್‌ ಅವರನ್ನು ವರ್ಗಾವಣೆ ಮಾಡಿತ್ತು. ರೋಹಿಣಿ ಮತ್ತು ರೂಪಾ ಅವರಿಗೆ ಇನ್ನೂ ಹುದ್ದೆಯನ್ನು ನಿಯೋಜನೆ ಮಾಡಿಲ್ಲ.

ಪ್ರಮುಖ ಸುದ್ದಿ :-   ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement