ಬೆಂಗಳೂರು : ಮನೆಯಲ್ಲಿ ಸಿಲಿಂಡರ್ ಸ್ಪೋಟ, 10 ಮಂದಿಗೆ ಗಾಯ

ಬೆಂಗಳೂರು: ಮನೆಯೊಂದರ ಸಿಲಿಂಡರಿನಿಂದ ಅನಿಲ ಸೋರಿಕೆಯಾಗಿ ಅದು ಸ್ಫೋಟಗೊಂಡು 10 ಮಂದಿ ಗಾಯಗೊಂಡ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು, ಶುಕ್ರವಾರ ಬೆಳಗ್ಗೆ ನಡೆದ ಬಗ್ಗೆ ವರದಿಯಾಗಿದೆ.
ಅಜ್ಮಲ್ (46), ನಾಜೀಂ (42), ಅಮೀನ್‌ಜಾನ್ (52), ರೇಷ್ಮಾಭಾನು (48) ರಿಯಾನ್‌(14), ಅಜ್ವಾನ್ (12), ಫಯಾಜ್ (10), ಶಬನಾಜ್‌ (18), ನಾಸೀಂ (40), ಸಲ್ಮಾ (33) ಇನ್ನಿತರರು ಗಾಯಗೊಂಡಿದ್ದು, ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಿಯಪ್ಪನಪಾಳ್ಯದ 2ನೇ ಮುಖ್ಯರಸ್ತೆ 4ನೇ ಕ್ರಾಸ್‍ನ ಕಟ್ಟಡವೊಂದರ ಒಂದನೇ ಮಹಡಿಯಲ್ಲಿ ಅಜ್ಮಲ್ ಕುಟುಂಬ ಬಾಡಿಗೆಗೆ ಇದ್ದು, ಅವರ ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ನೆಂಟರು ಸಹ ಬಂದಿದ್ದರು ಎನ್ನಲಾಗಿದೆ.

ಸಮಾರಂಭಕ್ಕಾಗಿ ರಾತ್ರಿ ತಿಂಡಿ-ತಿನಿಸುಗಳನ್ನು ಮಾಡಿದ ನಂತರ ಸಿಲಿಂಡರ್ ಆಫ್ ಮಾಡದೆ ಮಲಗಿದ್ದರು ಎನ್ನಲಾಗಿದೆ. ಆ ವೇಳೆ ಸಿಲಿಂಡರಿನಿಂದ ಗ್ಯಾಸ್‌ ಸೋರಿಕೆಯಾಗಿದ್ದು, ಯಾರ ಗಮನಕ್ಕೂ ಬಂದಿಲ್ಲ. ಬೆಳಿಗ್ಗೆ 6:30ರ ಸುಮಾರಿಗೆ ಲೈಟ್ ಸ್ವಿಚ್‌ ಹಾಕುತ್ತಿದ್ದಂತೆ ಅನಿಲ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮನೆಯಲ್ಲಿದ್ದವರಿಗೆ ಸುಟ್ಟಗಾಯಗಳಾಗಿವೆ. ಸ್ಪೋಟದ ರಂಭಸಕ್ಕೆ ಮನೆಯ ಒಂದು ಭಾಗದ ಗೋಡೆ ಉರುಳಿ ಬಿದ್ದಿದೆ.
ಕೂಗಾಟ, ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ. ಬೆಂಕಿಯಿಂದ ಮನೆಯವರನ್ನು ರಕ್ಷಿಸಿ ಹೊರ ಕರೆತಂದಿದ್ದಾರೆ. ಹಾಗೂ ಅವರು ತಕ್ಷಣ ಆ್ಯಂಬುಲೆನ್ಸ್‍ಗೆ ಕರೆ ಮಾಡಿ ಪೊಲೀಸರಿಗೂ ವಿಷಯ ತಿಳಿಸಿದರು.
ರಾಜಾಜಿನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement