ಹಿಜಾಬ್ ನಿಷೇಧ : ಅರ್ಜಿ ವಿಚಾರಣೆಗೆ ಪೀಠ ರಚಿಸುವುದಾಗಿ ತಿಳಿಸಿದ ಸಿಜೆಐ ಚಂದ್ರಚೂಡ

ನವದೆಹಲಿ: ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಪಿ.ಎಸ್‌. ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು.
ಹೋಳಿ ಹಬ್ಬದ ರಜೆಯ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು. “ಐದು ದಿನಗಳ ಬಳಿಕ ಪರೀಕ್ಷೆ ನಿಗದಿಯಾಗಿದೆ. ಈ ಮೊದಲು ಎರಡು ಬಾರಿ ಇದನ್ನು ಉಲ್ಲೇಖಿಸಲಾಗಿದೆ. 10 ದಿನಗಳ ಹಿಂದೆಯೂ ಉಲ್ಲೇಖಿಸಲಾಗಿತ್ತು” ಎಂದರು. ಸಿಜೆಐ ಅವರು “ಪ್ರಕರಣವನ್ನು ಆಲಿಸಲು ನಾನು ಪೀಠ ರಚಿಸುತ್ತೇನೆ” ಎಂದು ಭರವಸೆ ನೀಡಿದರು.
ಹಿಜಾಬ್‌ ನಿಷೇಧಿಸುವ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಭಿನ್ನ ನಿಲುವು ತಳೆದಿತ್ತು. ಇದಕ್ಕೂ ಮುನ್ನ, ಕರ್ನಾಟಕ ಹೈಕೋರ್ಟ್‌ ನಿಷೇಧವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement