ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಪೈಲಟ್ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ.
ಜೇವರ್ಗಿ ಪಟ್ಟಣದ ಹೊರವಲಯದ ವಿಜಯಪುರ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‍ನಲ್ಲಿ ಈ ಘಟನೆ ನಡೆದಿದೆ. ಜೇವರ್ಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಯಡಿಯೂರಪ್ಪ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಯಡಿಯೂರಪ್ಪ ಅವರಿದ್ದ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಮೇಲಕ್ಕೆ ಹಾರಿಬಂದಿವೆ. ಹೆಲಿಪ್ಯಾಡ್ ಸುತ್ತಮುತ್ತಲ ಜಮೀನಿನನಲ್ಲಿ ಹಾಕಲಾಗಿರುವ ಧೂಳು ಹಾಗೂ ಪ್ಲಾಸ್ಟಿಕ್ ಚೀಲಗಳು ಲ್ಯಾಂಡಿಂಗ್ ವೇಳೆ ಗಾಳಿಗೆ ಒಮ್ಮೆಗೇ ಹೆಲಿಕ್ಯಾಪ್ಟರ್ ಮೇಲೆ ಹಾರಿ ಬಂದಿವೆ.
ಹೆಲಿಕ್ಯಾಪ್ಟರ್ ಗಾಳಿಗೆ ಮೇಲಕ್ಕೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕ್ಷಣಕಾಲ ಕಕ್ಕಾಬಿಕ್ಕಿಯಾಗಿದ್ದರು.
ತಕ್ಷಣವೇ ಎಚ್ಚೆತ್ತುಕೊಂಡ ಪೈಲೆಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡದೆ ಮತ್ತೆ ಹಾರಿಸಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ಲಾಸ್ಟಿಕ್ ಚೀಲಗಳ ತೆರವುಗೊಳಿಸಿದ ನಂತರ ಹೆಲಿಕ್ಯಾಪ್ಟರ್ ಸುರಕ್ಷಿತವಾಗಿ ಹೆಲಿಪ್ಯಾಡ್‍ನಲ್ಲಿ ಲ್ಯಾಂಡ್ ಆಗಿದೆ.
ಹೆಲಿಕ್ಯಾಪ್ಟರ್ ಲ್ಯಾಂಡ್ ಆದ ಬಳಿಕ ಯಡಿಯೂರಪ್ಪನವರು ಸುರಕ್ಷಿತವಾಗಿ ಕೆಳಗೆ ಇಳಿದರು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ