ಕೆ.ಆರ್.ಪುರಂ-ವೈಟ್ ಫೀಲ್ಡ್ ಮೆಟ್ರೋ ಮಾರ್ಗ: ಮಾರ್ಚ್‌ 25ರಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ

ಬೆಂಗಳೂರು : ಬೆಂಗಳೂರಿನ ಕೆ.ಆರ್. ಪುರಂ-ವೈಟ್‌ಫೀಲ್ಡ್ ಮಧ್ಯದ ಮೆಟ್ರೋದ ನೇರಳೆ ಮಾರ್ಗದ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ಉದ್ಘಾಟಿಸಲಿದ್ದಾರೆ. ನಮ್ಮ ಮೆಟ್ರೋದ 13.71 ಕಿಮೀ ಮಾರ್ಗವು ಒಂದು ತಾಸು ಇದ್ದ ಪ್ರಯಾಣದ ಅವಧಿಯನ್ನು ಸುಮಾರಿ 25 ನಿಮಿಷಗಳ ವರೆಗೆ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಯಾಣಿಕರು ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವೆ ಕೇವಲ 35 ರೂ.ಗಳಲ್ಲಿ ಪ್ರಯಾಣಿಸಬಹುದಾಗಿದೆ.
ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗ ವಿಸ್ತರಣೆಯು 2020 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕೋವಿಡ್‌ ಮತ್ತಿತರ ಕಾರಣಗಳಿಂದ ಅದು ಕಾರ್ಯಾರಂಭ ಮಾಡಿರಲಿಲ್ಲ.
ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವೆ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ (ಟ್ರೀ ಪಾರ್ಕ್), ಪಟ್ಟಂದೂರು ಅಗ್ರಹಾರ (ಐಟಿಪಿಬಿ), ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗುರುದಾಚಾರ್ಪಾಳ್ಯ, ಮಹದೇವಪಾಲಯ್ಯನಪುರ (ಸಿಂಗ್) ಹೀಗೆ  11 ನಿಲ್ದಾಣಗಳು ಇರುತ್ತವೆ. ಕೆಆರ್ ಪುರಂ ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ಎಂಬ ಎರಡು ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ನಮ್ಮ ಮೆಟ್ರೊ ನೇರಳೆ ಮಾರ್ಗವನ್ನು ಕೆ.ಆರ್. ಪುರಂ-ಬೈಯಪ್ಪನಹಳ್ಳಿವರೆಗೆ ವಿಸ್ತರಿಸಲಾಗುತ್ತಿದ್ದು, ಇದು  ಇದೇ ಒಳಗೆ ಪೂರ್ಣಗೊಳ್ಳಲಿದೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

ವೈಟ್‌ಫೀಲ್ಡ್-ಕೆಆರ್ ಪುರಂ ವಿಭಾಗದಲ್ಲಿ ಪ್ರತಿದಿನ ಸುಮಾರು 1.2 ಲಕ್ಷ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಈ ಮಾರ್ಗದಲ್ಲಿ ಗಂಟೆಗೆ 80 ಕಿ. ಮೀ. ವೇಗದಲ್ಲಿ ನಮ್ಮ ಮೆಟ್ರೋ ರೈಲುಗಳನ್ನು ಓಡಿಸಿ ಪರೀಕ್ಷೆ ನಡೆಸಲಾಗಿದೆ. 13 ಕಿ. ಮೀ. ಮಾರ್ಗವನ್ನು 12 ನಿಮಿಷಗಳಲ್ಲಿ ರೈಲು ಕ್ರಮಿಸಿದೆ (ಯಾವುದೇ ನಿಲ್ದಾಣವಿಲ್ಲದೆ). ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪೀಕ್‌ ಹವರ್ ಅಲ್ಲದ ಸಮಯದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಅಲ್ಲದೇ ಬಿಎಂಟಿಸಿ ಸಹ ಮೆಟ್ರೋ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಬಸ್ ಸೇವೆಯನ್ನು ಒದಗಿಸಲಿದೆ. ನಿಲ್ದಾಣಗಳ ಸುತ್ತಲೂ ಸರ್ವಿಸ್‌ ರಸ್ತೆಗಳ ಎರಡೂ ಬದಿಯಲ್ಲಿ, ಪ್ರವೇಶ ಮತ್ತು ನಿರ್ಗಮನ ದ್ವಾರದೊಂದಿಗೆ ಬಿಎಂಟಿಸಿ ಬಸ್ ನಿಲ್ದಾಣಗಳ ಮಲ್ಟಿಮೋಡಲ್ ಏಕೀಕರಣ ಕೇಂದ್ರ ಇರಲಿದೆ. ವಿಕಲಚೇತನರಿಗೆ ಎಲ್ಲಾ ನಿಲ್ದಾಣಗಳಲ್ಲಿ ಸೌಲಭ್ಯವಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್‌ಗಳು, 4 ಎಲಿವೇಟರ್‌ಗಳು ಮತ್ತು 8 ಮೆಟ್ಟಿಲುಗಳನ್ನು ಅಳವಡಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement