ವಾಷಿಂಗ್ಟನ್: ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತ ಲಲಿತ್ ಝಾ ಅವರು ಶನಿವಾರ ಮಧ್ಯಾಹ್ನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಲಿಸ್ತಾನ್ ಪರ ಪ್ರತಿಭಟನೆ ವರದಿ ಮಾಡುತ್ತಿದ್ದಾಗ ಖಾಲಿಸ್ತಾನ್ ಬೆಂಬಲಿಗರು ದೈಹಿಕ ಹಲ್ಲೆ ನಡೆಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಯನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಂಡಿಸಿದೆ.
ಲಲಿತ್ ಝಾ ಅವರು ತಮ್ಮನ್ನು ರಕ್ಷಿಸಲು ಮತ್ತು ತನ್ನ ಕೆಲಸವನ್ನು ಮಾಡಲು ಸಹಾಯ ಮಾಡಿದ್ದಕ್ಕಾಗಿ ಅಮೆರಿಕದ ಸೀಕ್ರೆಟ್ ಸರ್ವೀಸ್ಗೆ ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ.
ಖಾಲಿಸ್ತಾನ್ ಬೆಂಬಲಿಗರು ತನ್ನ ಎಡ ಕಿವಿಗೆ ಎರಡು ಕೋಲುಗಳಿಂದ ಹೊಡೆದಿದ್ದಾರೆ ಎಂದು ಅವರು ಹೇಳಿದರು. ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಖಲಿಸ್ತಾನ್ ಬೆಂಬಲಿಗರ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಒಂದು ಹಂತದಲ್ಲಿ ನಾನು 911 ಗೆ ಕರೆ ಮಾಡುವಷ್ಟು ಬೆದರಿಕೆಯನ್ನು ಅನುಭವಿಸಿದೆ. ನಂತರ ನಾನು ಸೀಕ್ರೆಟ್ ಸರ್ವೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಘಟನೆಯನ್ನು ವಿವರಿಸಿದೆ” ಎಂದು ಝಾ ತಿಳಿಸಿದ್ದಾರೆ. ಆದರೆ, ತನಗೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಪತ್ರಕರ್ತ ಝಾ ನಿರ್ಧರಿಸಿದ್ದಾರೆ.
ಅಮೃತಪಾಲ್ (ಸಿಂಗ್) ಅವರನ್ನು ಬೆಂಬಲಿಸಿ ಖಲಿಸ್ತಾನ್ ಪರ ಪ್ರತಿಭಟನಾಕಾರರು ಖಾಲಿಸ್ತಾನ್ ಧ್ವಜಗಳನ್ನು ಬೀಸಿದರು ಮತ್ತು ಅಮೆರಿಕದ ಸೀಕ್ರೆಟ್ ಸರ್ವೀಸ್ ಸಮ್ಮುಖದಲ್ಲಿ ರಾಯಭಾರ ಕಚೇರಿ ಬಳಿ ಬಂದರು. ಅವರು ರಾಯಭಾರ ಕಚೇರಿಯನ್ನು ಧ್ವಂಸಗೊಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದರು ಮತ್ತು ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧುಗೆ ಬೆದರಿಕೆ ಹಾಕಿದರು ಎಂದು ಝಾ ತಿಳಿಸಿದ್ದಾರೆ.
ಅವರು ಆಂಗ್ಲ ಮತ್ತು ಪಂಜಾಬಿ ಎರಡರಲ್ಲೂ ಭಾರತ ವಿರೋಧಿ ಭಾಷಣಗಳನ್ನು ಮಾಡಲು ಮೈಕ್ರೊಫೋನ್ಗಳನ್ನು ಬಳಸಿದರು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಪಂಜಾಬ್ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದರು.
ಘಟನೆಯನ್ನು ಖಂಡಿಸಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿಕೆಯಲ್ಲಿ, “ಹಿರಿಯ ಪತ್ರಕರ್ತರ ಮೇಲಿನ ಇಂತಹ ಗಂಭೀರ ಮತ್ತು ಅನಗತ್ಯ ದಾಳಿಯನ್ನು ನಾವು ಖಂಡಿಸುತ್ತೇವೆ. ಇಂತಹ ಚಟುವಟಿಕೆಗಳು ‘ಖಾಲಿಸ್ತಾನಿ ಪ್ರತಿಭಟನಾಕಾರರು’ ಮತ್ತು ಅವರ ಬೆಂಬಲಿಗರ ಹಿಂಸಾತ್ಮಕ ಮತ್ತು ಸಮಾಜ ವಿರೋಧಿ ಪ್ರವೃತ್ತಿಯನ್ನು ಒತ್ತಿಹೇಳುತ್ತವೆ ಎಂದು ಹೇಳಿದೆ. ಭಾರತೀಯ ರಾಯಭಾರ ಕಚೇರಿಯು ಈ ವಿಷಯದಲ್ಲಿ ತ್ವರಿತ ಸ್ಪಂದನೆಗಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸಿತು.


ನಿಮ್ಮ ಕಾಮೆಂಟ್ ಬರೆಯಿರಿ