ಅವೈಜ್ಞಾನಿಕ ಮೀಸಲಾತಿ ನಿಗದಿ, ಅಲ್ಪಸಂಖ್ಯಾತರಿಗೆ ವಂಚನೆ : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು:  ಅವೈಜ್ಞಾನಿಕವಾಗಿ  ಮೀಸಲು ನಿಗದಿ ಮಾಡಲಾಗಿದೆ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಿತ್ತುಕೊಂಡು  ರಾಜ್ಯ ಸರ್ಕಾರ ವಂಚನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತು ಪಂಚಮಸಾಲಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ನೀಡಲು ನಿರ್ಧರಿಸಲಾಗಿದೆ. ಮೀಸಲಾತಿ ಭಿಕ್ಷೆಯಲ್ಲ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯ ಭಿಕ್ಷೆ ಬೇಡುತ್ತಿಲ್ಲ, ಒಬ್ಬರ ಹಕ್ಕುಗಳನ್ನು ಕಿತ್ತು ಮತ್ತೊಬ್ಬರಿಗೆ ಕೊಡುವ ಮೂಲಕ ಸಮುದಾಐಗಳ ನಡುವೆ ದ್ವೇಷ ಉಂಟು ಮಾಡುವ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ನಮಗೆ ಯಾರ ಮೇಲೂ ದ್ವೇಷವಿಲ್ಲ, ಆದರೆ ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶದಲ್ಲಿ ಮೀಸಲಾತಿ ವಿಷಯದಲ್ಲಿ ನ್ಯಾಯಾಲಯದಿಂದ ಏನು ತೀರ್ಪು ಬಂದಿದೆ ಎಂಬುದು ಕಣ್ಮುಂದೆ ಇರುವಾಗ ಅದನ್ನು ನೋಡದೆ ಕಾನೂನು ವಿಭಾಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
15 ದಿನದ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಇವರು ಮಾಡಿರುವ ಅವೈಜ್ಞಾನಿಕ ನಿರ್ಧಾರಗಳನ್ನು ರದ್ದು ಮಾಡುತ್ತೇವೆ. ಅಲ್ಪಸಂಖ್ಯಾತರೇನು ನಮ್ಮವರಲ್ಲವೇ ಅವರ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡಿದ್ದೇಕೆ, ಇಂತಹ ದ್ವೇಷದ ರಾಜಕಾರಣ ಏಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಸ್ವತಂತ್ರ ಭಾರತದ 75 ವರ್ಷದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರ 90 ದಿನದಲ್ಲಿ ಮೂರು ಬಾರಿ ಮೀಸಲಾತಿಯನ್ನು ಬದಲಾವಣೆ, ಪರಿಷ್ಕರಣೆ ಮಾಡಿಲ್ಲ. ಕಾರ್ನಾಕಟದಲ್ಲಿ ಬಿಜೆಪಿ ಸರ್ಕಾರ ಆ ಕೆಲಸ ಮಾಡಿದೆ, ಒಂದೊಂದು ಜಾತಿಯನ್ನು ಮತ್ತೊಂದು ಜಾತಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ.
ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಪರಿಶಿಷ್ಟರ ಮೀಸಲು ಪರಿಷ್ಕರಣೆಯೂ ಗೊಂದಲಕಾರಿಯಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೋಮ್ಮಾಯಿ ಸರ್ಕಾರ ಮಾಡಿರುವ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿದೆ. ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆಯಿಂದ ಯಾರಿಗೂ ಲಾಭವಾಗುವುದಿಲ್ಲ. ಬಿಜೆಪಿ ಜಾಹಿರಾತಿನಲ್ಲಿ ಸಂಪುಟ ಸಭೆಯ ನಿರ್ಣಯವನ್ನು ಬಳಸಿಕೊಳ್ಳಬಹುದಷ್ಟೆ ಎಂದರು.
ಮುಸ್ಲಿಮರನ್ನು ಇಡಬ್ಲ್ಯೂಎಸ್‌ಗೆ ಸ್ಥಳಾಂತರಿಸುವುದಾಗಿ ಹೇಳಲಾಗಿದೆ, ಇಡಬ್ಲ್ಯೂಎಸ್ ಸಂಪೂರ್ಣವಾಗಿ ಆರ್ಥಿಕತೆ ಆಧಾರದ ಮೇಲೆ ನೀಡುವ ಮೀಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಅದರಲ್ಲಿ ಜಾತಿ ಆಧಾರದಲ್ಲಿ ಬೇರೆಯವರು ಸೇರ್ಪಡೆಯಾಗಲು ಸಾಧ್ಯವಿಲ್ಲ. ಬಿಜೆಪಿಯ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಲ್ಪಸಂಖ್ಯಾತರ ಮೇಲಿನ ದ್ವೇಷದಿಂದಾಗಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಜನರನ್ನು ಜಾತಿ, ಧರ್ಮದ ಆಧಾರದ ಮೇಲೆ ವಿಭಜಿಸುವ ಯತ್ನ ಮಾಡಿದೆ. ಡಾ. ಅಂಬೇಡ್ಕರ್ ನೀಡಿದ ಸಂವಿಧಾನ ಜಾತಿ, ಧರ್ಮಬೇಧವಿಲ್ಲದೆ ಎಲ್ಲರಿಗೂ ರಕ್ಷಣೆ ಕೊಡುತ್ತದೆ. ಅವಕಾಶ ವಂಚಿತರಿಗೆ ರಕ್ಷಣೆ ನೀಡಲು ಮೀಸಲಾತಿ ಒಂದು ಮಾರ್ಗವಷ್ಟೆ, ಅದರಾಚೆಯೂ ಸರ್ಕಾರಗಳು ಶೋಷಿತರ ರಕ್ಷಣೆಗೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಅಲ್ಪಸಂಖ್ಯಾತರ ಮೀಸಲಾತಿಗೆ ಸೇರಿದ 2ಬಿ ರದ್ದುಗೊಳಿಸಲು ಇವರಿಗೆ ಯಾಋಾದರೂ ವರದಿ ನೀಡಿದ್ದಾರೆಯೇ..? ಅಥವಾ ನ್ಯಾಯಾಲಯದ ತೀರ್ಮಾನ ಇದೆಯೇ..? ಸ್ವಯಂಪ್ರೇರಿತವಾಗಿ ನಿರ್ಧಾರ ತೆಗೆದುಕೊಂಡಿದ್ದು ಯಾಕೆ..? ಯಾವ ಆಧಾರದ ಮೇಲೆ ಅಲ್ಪಸಂಖ್ಯಾತರ ಮೀಸಲುನ್ನು ಕಿತ್ತು ಒಕ್ಕಲಿಗರಿಗೆ, ಲಿಂಗಾಯಿತರಿಗೆ ನೀಡಲಾಗಿದೆ ? ಹಾಗೂ ಅಲ್ಪಸಂಖ್ಯಾತರನ್ನು ಇಡಬ್ಲ್ಯೂಎಸ್‍ಗೆ ಸೇರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಒಂಬತ್ತು ನ್ಯಾಯಾಧೀಶರ ಸಂವಿಧಾನಿಕ ಪೀಠ ಮೀಸಲಾತಿ ಶೇ.50ರ ಮಿತಿಯಲ್ಲಿರಬೇಕು ಎಂದು ತೀರ್ಪು ನೀಡಿದೆ. ಸಂವಿಧಾನದ ತೀರ್ಪನ್ನು ಮೀರಿ ನಿರ್ಣಯ ತೆಗೆದುಕೊಳ್ಳಬೇಕಾದರೆ ಸಂಸತ್‍ನಲ್ಲಿ ಸಂವಿಧಾನ ತಿದ್ದುಪಡಿಯಾಗಬೇಕಾಗುತ್ತದೆ. ಪರಿಶಿಷ್ಟರ ಮೀಸಲಾತಿ ಹೆಚ್ಚಿಸಲು ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ 2020ರಲ್ಲಿ ವರದಿ ನೀಡಿದೆ. ಬಿಜೆಪಿ ಸರ್ಕಾರ ಮೂರು ವರ್ಷ ಏನನ್ನು ಮಾಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಅದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement