ಬೀದರ: ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಾರಿಗೆ ತಂದಿದ್ದ ಮುಸ್ಲಿಮರಿಗೆ ನೀಡಲಾಗಿದ್ದ 4% ಮೀಸಲಾತಿ ರದ್ದುಪಡಿಸಿದ ನಂತರ ಈ ಹೇಳಿಕೆ ಬಂದಿದೆ.
ಚುನಾವಣೆಗೆ ಮುನ್ನ ನಡೆದ ತನ್ನ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಶುಕ್ರವಾರ ರಾಜ್ಯ ಸರ್ಕಾರವು ಮುಸ್ಲಿಮರಿಗೆ 4% ರಷ್ಟು ಒಬಿಸಿ ಮೀಸಲಾತಿಯನ್ನು ರದ್ದುಪಡಿಸಿತು. ಮತ್ತು ಅದನ್ನು ಎರಡು ಪ್ರಬಲ ಸಮುದಾಯಗಳಾದ ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿದೆ. ಮುಸ್ಲಿಮರನ್ನು ಶೇ 10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್) ಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಅವರ ಈ ಹೇಳಿಕೆ ಬಂದಿದೆ.
ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು, ಭಾನುವಾರ ಬೀದರ್ನಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮಾರಕ ಹಾಗೂ 20 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದರು ಹಾಗೂ 103 ಅಡಿ ಎತ್ತರದ ರಾಷ್ಟ್ರಧ್ವಜ ಧ್ವಜಾರೋಹಣ ಮಾಡಿ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ತನ್ನ “ಧ್ರುವೀಕರಣದ ರಾಜಕೀಯ” ಭಾಗವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದೆ ಎಂದು ಆರೋಪಿಸಿದ ಅವರು ಬಿಜೆಪಿ ಸರ್ಕಾರ ಆ ಮೀಸಲಾತಿಯನ್ನು ರದ್ದುಪಡಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅಮಿತ್ ಶಾ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಮತ್ತು ಹೈದರಾಬಾದ್ ವಿಮೋಚನಾ ಹೋರಾಟದ ಹುತಾತ್ಮರನ್ನು ಎಂದಿಗೂ ಸ್ಮರಿಸಲಿಲ್ಲ ಎಂದು ಹೇಳಿದರು.
‘ಕಾಂಗ್ರೆಸ್ ಮತ ಬ್ಯಾಂಕ್ ಗಾಗಿ ದುರಾಸೆಯಿಂದ ಸ್ವಾತಂತ್ರ್ಯಕ್ಕಾಗಿ ಹಾಗೂ ಹೈದರಾಬಾದ್ ವಿಮೋಚನೆಗಾಗಿ ಬಲಿದಾನ ಮಾಡಿದವರನ್ನು ಎಂದೂ ಸ್ಮರಿಸಲಿಲ್ಲ. 2.5 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ಕ್ರೂರ ನಿಜಾಮನ ಸೇನೆಯಿಂದ ಹತ್ಯೆಗೀಡಾದ ಗೋರಟಾ ಗ್ರಾಮದ ಜನರ ಬಲಿದಾನವಾದ ಅದೇ ಭೂಮಿಯಲ್ಲಿ ಈಗ 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳಿದರು.
ಈಗ ಅದೇ ನೆಲದಲ್ಲಿ ಆ ಅಮರ ಹುತಾತ್ಮರ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ 20 ಅಡಿ ಎತ್ತರದ ಸರ್ದಾರ್ ಪಟೇಲ ಅವರ ಪ್ರತಿಮೆಯು ಹೈದರಾಬಾದ್ನಿಂದ ನಿಜಾಮನನ್ನು ಹೊರಹಾಕುವಲ್ಲಿ ನಮ್ಮ ಮೊದಲ ಗೃಹ ಸಚಿವರು ವಹಿಸಿದ ಮಹತ್ವದ ಪಾತ್ರದ ಸಂಕೇತವಾಗಿದೆ. ಅವರ ಆ ಮಹತ್ಕಾರ್ಯದಿಂದಾಗಿಯೇ ಈ ಪ್ರದೇಶ, ಈ ಬೀದರ್ ಭಾರತದ ಭಾಗವಾಯಿತು ಎಂದು ಶಾ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ