ಜೆಡಿಎಸ್‌ ನಾಯಕ ಎ. ಟಿ. ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ: ಕಾಂಗ್ರೆಸ್‌ ಸೇರುತ್ತಾರೆಯೇ ?

ಬೆಂಗಳೂರು ; ಶುಕ್ರವಾರ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಶಾಸಕ ಎ. ಟಿ. ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದು, ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ತೆರಳಿದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಅಂತಿಮವಾಗಿ ಇಂದು ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಧಾನಸಭೆ ಸ್ಪೀಕರ್‌ ಕಚೇರಿಯಲ್ಲಿ ಎ.ಟಿ ರಾಮಸ್ವಾಮಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಸರಿ ಇದ್ದದ್ದು ಸರಿ ಎಂದು ಹೇಳಿದ್ದೇನೆ. ತಪ್ಪಿದ್ದರೆ ತಪ್ಪು ಎಂದು ಹೇಳಿದ್ದೇನೆ. ನಾನು ಜೆಡಿಎಸ್‌ ತೊರೆದಿಲ್ಲ. ಜೆಡಿಎಸ್‌ನವರೇ ನನ್ನನ್ನು ಹೊರ ಹಾಕಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅರಕಲಗೂಡು ಕ್ಷೇತ್ರದಲ್ಲಿ ಎ. ಟಿ. ರಾಮಸ್ವಾಮಿಯನ್ನು ಬಿಟ್ಟು ಎ. ಮಂಜು ನೇತೃತ್ವದಲ್ಲಿ ಜೆಡಿಎಸ್‌ ಪಕ್ಷದ ಪಂಚರತ್ನ ರಥಯಾತ್ರೆ ನಡೆದಿತ್ತು. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಮಸ್ವಾಮಿ ಅವರು ಜಡಿಎಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಆದರೆ ಅರಕಲಗೂಡು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಮಂಗಳವಾರ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಗುರುವಾರ ಕಾಂಗ್ರೆಸ್ ಸೇರಿದ್ದಾರೆ. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಇತ್ತೀಚಿಗೆ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು
ಕರ್ನಾಟಕ ವಿಧಾನಸಭೆಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement