ಭಾರತದ ಆರ್ಥಿಕ ಪ್ರಗತಿಗೆ ಡಾ. ಅಂಬೇಡ್ಕರ ಚಿಂತನೆ ಪೂರಕ

ಹುಬ್ಬಳ್ಳಿ: ಆರ್ಥಿಕ ಶೋಷಣೆ, ಅಸಮಾನತೆ ಕಡಿಮೆ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ವಿಚಾರ ಡಾ. ಅಂಬೇಡ್ಕರ್ ವ್ಯಕ್ತಪಡಿಸಿದ್ದರು ಎಂದು ಶಾಸಕ ಸಾಬಣ್ಣ ತಳವಾರ ಹೇಳಿದರು.
ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಚೇರಿ ಕೇಶವಕುಂಜ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಅವರು ಡಾ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ಕುರಿತು ಅವರು ಮಾತನಾಡಿದರು.
ಕೆಲವೇ ಜನರ ಕೈಯಲ್ಲಿ ಅಧಿಕಾರ ಹಾಗೂ ಬಡತನ ಮತ್ತು ಅಸಮಾನತೆ ದೇಶದ ಆರ್ಥಿಕ ಕುಂಟಿತಕ್ಕೆ ಕಾರಣವಾಗಿತ್ತು. ವಾರಸುದಾರಿಕೆ ಪದ್ಧತಿಯಿಂದ ವೆಚ್ಚ ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿತ್ತು. ರೈತರಿಗೆ ಅತೀ ಅವಶ್ಯವಾದದ್ದು ಬೀಜ, ಗೊಬ್ಬರ, ಸಲಕರಣೆ ಹಾಗೂ ಆರ್ಥಿಕ ವ್ಯವಸ್ಥೆ. ಬಡ್ಡಿ ಪ್ರಮಾಣ ಹೆಚ್ಚಿರುವ ಖಾಸಗಿ ಸಾಲದಿಂದ ಕೃಷಿಕರ ಆರ್ಥಿಕ ದುರ್ಬಲತೆಗೆ ಕಾರಣ‌ ಎಂದು ಡಾ. ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು.

ನೀರಿನ ವಿಷಯದಲ್ಲಿ ಅಸ್ಪೃಶ್ಯತೆ ಅನುಭವಿಸಿದ್ದ ಡಾ.ಅಂಬೇಡ್ಕರ್ ಮುಂದೆ ಭಾರತದ ಜಲಸಂಪನ್ಮೂಲ ಸಚಿವರಾಗಿ ದಾಮೋದರ ಕಣಿವೆ ಯೋಜನೆ ಮೂಲಕ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ದೇಶದ ಉತ್ತರ ಹಾಗೂ ದಕ್ಷಿಣದ ನದಿಗಳ ಜೋಡಣೆಯಾಗಬೇಕೆಂದು ಪ್ರತಿಪಾದಿಸಿದ್ದರು ಎಂದು ಸಾಬಣ್ಣ ತಳವಾರ ಹೇಳಿದರು.
ಬ್ರಿಟಿಷ್ ಇಂಡಿಯಾದ ಆರ್ಥಿಕ ವ್ಯವಸ್ಥೆ ಕುರಿತು ಅಧ್ಯಯನ ನಡೆಸಿದ್ದ ಅಂಬೇಡ್ಕರ್, ಬ್ರಿಟಿಷರ ಯೋಚನೆಯಿಂದ ಭಾರತದಲ್ಲಿ ಬಡತನ ಉದ್ಭವಿಸಿದೆ ಎಂದು ಮನಗಂಡರು. ಸರ್ಕಾರದಿಂದ ಉದ್ಯಮಗಳಿಗೆ ಹೂಡಿಕೆಯಾಗಬೇಕು. ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತಕ್ಕೆ ಸಮರ್ಪಕ ಹಣ ಪೂರೈಕೆಯಾಗಬೇಕು. ಜಾತಿ ಆಧಾರಿತ ಉದ್ಯೋಗದಿಂದ ಶ್ರಮ ವಿಭಜನೆ ಬದಲು ಶ್ರಮಿಕರ ವಿಭಜನೆ ಆದದ್ದು ದುರ್ದೈವ. ಉದ್ಯಮಶೀಲತೆ ಹಾಗೂ ಕೌಶಲ್ಯ ಎಲ್ಲರ ಸ್ವತ್ತಾಗಬೇಕೆಂಬ ವಿಚಾರವನ್ನು ಡಾ. ಅಂಬೇಡ್ಕರ್ ಅವರು ಹೊಂದಿದ್ದರು. ಭಾರತದ ರಿಸರ್ವ್‌ ಬ್ಯಾಂಕ್ ಸ್ಥಾಪನೆಯಲ್ಲೂ ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement