‘ಮೋದಿ ಉಪನಾಮ’ದ ಮಾನನಷ್ಟ ಪ್ರಕರಣ: ಸೂರತ್ ಕೋರ್ಟ್‌ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ನಾಳೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ (ಏಪ್ರಿಲ್ 3) ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಹಾಗೂ ‘ಮೋದಿ ಉಪನಾಮ’ದ ಹೇಳಿಕೆ ಕುರಿತ ಮಾನನಷ್ಟ ಪ್ರಕರಣದಲ್ಲಿ ತಮ್ಮ ವಿರುದ್ಧದ ಅಪರಾಧ ಮತ್ತು ಎರಡು ವರ್ಷಗಳ ಶಿಕ್ಷೆಯ ವಿರುದ್ಧ ಅಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಾಂಗ್ರೆಸ್‌ ಪಕ್ಷದ ಕಾನೂನು ತಂಡವು ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಲಿರುವ ಮನವಿಯನ್ನು ಸಿದ್ಧಪಡಿಸಿದೆ. ಇದರ ಜೊತೆಗೆ, ಮಾನನಷ್ಟ ಮೊಕದ್ದಮೆಯಲ್ಲಿನ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ರಾಹುಲ್‌ ಗಾಂಧಿ ನ್ಯಾಯಾಲಯಕ್ಕೆ ಮನವಿ ಮಾಡುವ ನಿರೀಕ್ಷೆಯಿದೆ.
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷ ಶಿಕ್ಷೆಗೊಳಗಾದ ಒಂದು ದಿನದ ನಂತರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಅವರ ಅನರ್ಹತೆಯನ್ನು ಘೋಷಿಸಿದ ಲೋಕಸಭೆಯ ಸಚಿವಾಲಯವು ಅಧಿಸೂಚನೆಯಲ್ಲಿ ಇದು ಮಾರ್ಚ್ 23 ರಿಂದ, ಶಿಕ್ಷೆಯ ದಿನದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.

ಸೂರತ್‌ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ಪರಿಣಾಮವಾಗಿ, ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿ ಅವರು ಶಿಕ್ಷೆಗೊಳಗಾದ ದಿನಾಂಕದಿಂದ ಅಂದರೆ 23 ಮಾರ್ಚ್, 2023 ರಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆ ಹೇಳಿದೆ.
“ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಯಾಕಿರುತ್ತದೆ?” ಎಂಬ ಹೇಳಿಕೆಗಾಗಿ ಗುಜರತ್‌ ಬಿಜೆಪಿ ಶಾಸಕ ಪೂರ್ಣೇಶ ಮೋದಿ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್‌ನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರ ಅನರ್ಹತೆಯ ನಂತರ, ಮೇಲಿನ ನ್ಯಾಯಾಲಯವು ಅವರ ಅಪರಾಧ ಮತ್ತು ಶಿಕ್ಷೆಗೆ ತಡೆ ನೀಡದ ಹೊರತು ರಾಹುಲ್ ಗಾಂಧಿ ಎಂಟು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement