ಬೆಂಗಳೂರು : ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಐತಿಹಾಸಿಕ ಹಿರಿಮೆ ಸಾಧಿಸುವ ಗುರಿಯೊಂದಿಗೆ ಆಡಳಿತಾರೂಢ ಬಿಜೆಪಿಯು ಕೇವಲ ರಾಜಕೀಯ ನಾಯಕರನ್ನು ಪ್ರಚಾರದ ಹಾದಿಯಲ್ಲಿ ನಿಯೋಜಿಸುವುದಲ್ಲದೆ “ಸ್ಟಾರ್ ಪ್ರಚಾರಕ”ರಾಗಿ ಸಿನೆ ತಾರೆಯರನ್ನೂ ಕರೆತರುವ ಪ್ರಯತ್ನ ಮಾಡುತ್ತಿದೆ.
ಮುಂದಿನ ತಿಂಗಳು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಸ್ಟಾರ್ ಪ್ರಚಾರಕರಾಗಿ ಹಲವಾರು ಕನ್ನಡ ನಟರನ್ನು ಸಂಪರ್ಕಿಸಿದೆ. ಇವರಲ್ಲಿ ಕಿಚ್ಚ ಸುದೀಪ ಕೂಡ ಒಬ್ಬರು, ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇಂದು, ಬುಧವಾರ ಮಧ್ಯಾಹ್ನ ಖಾಸಗಿ ಪಂಚತಾರಾ ಹೋಟೆಲ್ನಲ್ಲಿ ನಡೆಯುವ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷವನ್ನು ಸೇರುವ ಇಲ್ಲವೇ ಪಕ್ಷದ ಅಭ್ಯರ್ಥಿಗಳ ಪರವಾಗಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ.
ಇದು ನಡೆದರೆ ಕಿಚ್ಚ ಸುದೀಪ್ ಅವರ ಮೊದಲ ರಾಜಕೀಯ ಪ್ರವೇಶವಾಗಲಿದೆ. ಕಿಚ್ಚ ಸುದೀಪ ಅವರು ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸುದೀಪ್ ಅವರನ್ನ ಬಿಜೆಪಿಗೆ ಕರೆ ತರಲು ಎರಡು ತಿಂಗಳಿಂದ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮಾತುಕತೆ ಆಗಿದೆ. ಹೀಗಾಗಿ ಸುದೀಪ್ ಬಿಜೆಪಿ ಸೇರ್ಪಡೆ ಅಥವಾ ಬೆಂಬಲಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.
ಕುತೂಹಲಕಾರಿಯಾಗಿ, ಫೆಬ್ರವರಿಯಲ್ಲಿ, ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ ಅವರು ಕಿಚ್ಚ ಸುದೀಪ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು, ಸೂಪರ್ ಸ್ಟಾರ್ ಮತ್ತು ವಿರೋಧ ಪಕ್ಷದ ನಡುವೆ ಕೆಲವು ರೀತಿಯ ರಾಜಕೀಯ ಮಾತುಕತೆಗಳು ನಡೆಯುತ್ತಿವೆ ಎಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು.
ಆದರೆ, ಕಿಚ್ಚ ಸುದೀಪ್ ಮತ್ತು ಡಿಕೆ ಶಿವಕುಮಾರ ಅವರ ಆಪ್ತರು ಇದನ್ನು ವೈಯಕ್ತಿಕ ಭೇಟಿ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ 124 ಮತ್ತು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ. ಪಕ್ಷದ ಕೇಂದ್ರ ನಾಯಕತ್ವವು ಏಪ್ರಿಲ್ 8 ರಂದು ಅಂತಿಮಗೊಳಿಸಿದ ನಂತರ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ