ಉಲ್ಬಣಗೊಂಡ ಥೈರಾಯ್ಡ್ ಗಂಟಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯರ ಸಾಧನೆ

ಬೆಳಗಾವಿ : ಗಂಟಲು ನೋವು, ಊತ, ನುಂಗಲು ತೊಂದರೆ ಎದುರಿಸುತ್ತಿದ್ದ 49 ವರ್ಷದ ಮಹಿಳೆಗೆ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ.
ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಯು ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣ ಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2 ರಿಂದ 3 ವರ್ಷಗಳಲ್ಲಿ ಉಲ್ಬಣಗೊಂಡು ರೋಗಿಗೆ ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. ಈ ನಡುವೆ ಮಹಿಳೆಯು ಅತಿ ರಕ್ತದೊತ್ತಡ, ಮಧುಮೇಹ ಸಮಸ್ಯೆಯು ಮೈಗೂಡಿತು. ಇದರಿಂದ ಬಳಲಿದ್ದ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದಳು. ನಂತರ ಆಸ್ಪತ್ರೆಯಲ್ಲಿನ ರೇಡಿಯಾಲಜಿ ವಿಭಾಗದ ಡಾ. ನಾಗರಾಜ ಪಿ. ಅವರಿಂದ ಮಹಿಳೆಗೆ ಸ್ಕಾನ್ ಮಾಡಲಾಗಿ ಅದರಲ್ಲಿ ಸುಮಾರು 11 ಸೆಂ.ಮೀ. ಸುತ್ತಳತೆಯ ಥೈರಾಯ್ಡ್ ಗಂಟು ಆಕೆಯ ಧ್ವನಿ ಪೆಟ್ಟಿಗೆಯನ್ನು ಅಂಟಿಕೊಂಡಿರುವುದು ಪತ್ತೆಯಾಯಿತು. ಇದರಿಂದ ಮಹಿಳೆಗೆ ಅರವಳಿಕೆ ನೀಡುವದೂ ಕೂಡ ಪ್ರಶ್ನಾರ್ಥಕವಾಗಿತ್ತು. ಆದರೆ, ಈ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಖ್ಯಾತ ಶಸ್ತ್ರ ಚಿಕಿತ್ಸಜ್ಞ ಡಾ. ಅಜಯ ಕಾಳೆ, ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಆರ್.ಜಿ. ನೆಲವಿಗಿ, ಡಾ. ದಿವೇಕರ, ಡಾ. ಸುರೇಶ ಸಹಯೋಗದಲ್ಲಿ, ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೋಗಿಯು ಈಗ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು ಶಸ್ತ್ರ ಚಿಕಿತ್ಸೆ ವಿಭಾಗದ ಡಾ. ಅಕ್ಷಯ ಮೆಟಗುಡ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ತದಡಿ ಬಳಿ ಪ್ರವಾಸಿಗರ ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ ; 40 ಜನರ ರಕ್ಷಣೆ

ಕ್ಲಿಷ್ಟ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರನ್ನು ಶಸ್ತ್ರ ಚಿಕಿತ್ಸೆಯ ವಿಭಾಗದ ಮುಖ್ಯಸ್ಥ ಡಾ. ಎ.ಕೆ. ರಡ್ಡೇರ ಅಭಿನಂದಿಸಿದ್ದಾರೆ. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ.ಧಾರವಾಡ ಮಾತನಾಡಿ, ಮಹಿಳೆಯರಲ್ಲಿ ಗರ್ಭಾವಸ್ಥೆ ಮತ್ತು ಋತುಬಂಧ ಸಮಯದಲ್ಲಿ ಹಾರ್ಮೋನುಗಳಲ್ಲಿ ಉಂಟಾಗಬಹುದಾದ ರಾಸಾಯನಿಕ ಬದಲಾವಣೆಗಳಿಂದ ಥೈರಾಯ್ಡ್ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ. ಆದರೆ ಸಕಾಲಕ್ಕೆ ಚಿಕಿತ್ಸೆ ಪಡೆದರೆ ಇಂತಹ ಶಸ್ತ್ರಚಿಕಿತ್ಸೆಗಳಿಂದ ದೂರವಿರಬಹುದಾಗಿದೆ ಎಂದು ಹೇಳಿದ್ದಾರೆ ಹಾಗೂ ವೈದ್ಯರಿಗೆ ಅಭಿನಂದಿಸಿದ್ದಾರೆ.
ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ವೈದ್ಯರ ತಂಡವನ್ನು ಶ್ಲಾಘಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement