ಪಿಎಸ್‌ಐ ಪ್ರಕರಣ: ಹಗರಣದಲ್ಲಿ ಭಾಗಿಯಾದವರ ಬಗ್ಗೆ ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ, ಹಾಲಿ ಅರ್ಜಿದಾರರಾಗಿರುವ 145 ಮಂದಿ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.
ಜೂನ್‌ 15ರ ಒಳಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ.
ರಾಜ್ಯ ಸರ್ಕಾರದ ಮರು ಪರೀಕ್ಷೆ ಆದೇಶ ರದ್ದತಿ ಕೋರಿ 145 ಮಂದಿ ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಶಿವಶಂಕರ್‌ ಅಮರಣ್ಣವರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿ, ನ್ಯಾಯಾಲಯದ ಮೆಟ್ಟಿಲೇರಿರುವ 145 ಮಂದಿ ಅರ್ಜಿದಾರ ಅಭ್ಯರ್ಥಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಜೂನ್‌ 15ರ ಒಳಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಡಿ ಆರ್‌ ರವಿಶಂಕರ್‌ ಮತ್ತು ರಾಜಗೋಪಾಲ ಅವರು “ಅರ್ಜಿದಾರರು ಮುಗ್ಧರಾಗಿದ್ದು, ಹಗರಣದಲ್ಲಿ ಅವರ ಪಾತ್ರವಿಲ್ಲ. ಹೀಗಾಗಿ, ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಅರ್ಜಿದಾರರಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪಿಎಸ್‌ಐ ಹಗರಣದ ತನಿಖೆಯ ನೇತೃತ್ವ ವಹಿಸಿರುವ ಸಿಐಡಿ ಮುಖ್ಯಸ್ಥರಾದ ಸಂಧು ಅವರು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ಪರಿಷತ್‌ ಚುನಾವಣೆ | ಎಲ್ಲ 4 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಗೆಲುವು ; ಕಾಂಗ್ರೆಸ್‌ಗೆ ಮುಖಭಂಗ ; ಅಭ್ಯರ್ಥಿಗಳ ಗೆಲವಿನ ಅಂತರವೆಷ್ಟು ?

ಹಗರಣದಲ್ಲಿ ಎರಡು ಬಗೆಯಿದ್ದು, ಬ್ಲೂಟೂತ್‌ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಒಂದು ಕಡೆಯಾದರೆ ನೇಮಕಾತಿ ವಿಭಾಗದಲ್ಲೇ ಓಎಂಆರ್‌ ಶೀಟ್‌ಗಳನ್ನು ತಿದ್ದಿರುವುದು ಇನ್ನೊಂದು ಭಾಗವಾಗಿದೆ. ಓಎಂಆರ್‌ ಶೀಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್‌) ವರದಿ ಪಡೆಯಲಾಗಿದೆ. ಮೊದಲಿಗೆ ಹಗರಣದಲ್ಲಿ 8 ಮಂದಿ ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆನಂತರ ಇದು 23ಕ್ಕೆ ಏರಿಕೆಯಾಗಿತ್ತು” ಎಂದರು.
ವಿಚಾರಣೆ ನಡೆಸಿದ ಪೀಠವು, ಪ್ರಕರಣದ ವಿಚಾರಣೆಯನ್ನು ಜೂನ್‌ 2ನೇ ವಾರಕ್ಕೆ ನಿಗದಿ ಮಾಡುತ್ತೇವೆ. ಈ ವೇಳೆಗೆ ಏನು ಬೆಳವಣಿಗೆ ಆಗಿರುತ್ತದೆ ಎಂಬುದನ್ನು ನೋಡೋಣ. ಯಾವುದೇ ಬೆಳವಣಿಗೆ ಆಗಿಲ್ಲ ಎಂದಾದರೆ ನಾವು ಆದೇಶ ಮಾಡುತ್ತೇವೆ. ತನಿಖಾಧಿಕಾರಿಗಳಿಗೆ ಒಂದು ಅವಕಾಶ ನೀಡೋಣ” ಎಂದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement