ಆನಂದ್‌ ಸಿಂಗ್‌ ಪುತ್ರನಿಗೆ ಬಿಜೆಪಿ ಟಿಕೆಟ್‌ : ರಾಣಿ ಸಂಯುಕ್ತ ತೀವ್ರ ಅಸಮಾಧಾನ, ಎರಡು ದಿನಗಳಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ

 ಹೊಸಪೇಟೆ : ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತ ಅವರು ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಬೆಂಬಲಿಗರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕೀಯದ ಪ್ರಸ್ತಾಪ ಮಾಡಿದ್ದು, ಸಚಿವ ಆನಂದ್‌ ಸಿಂಗ್ ಮತ್ತು ಅವರ ಮಗನನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಕುಟುಂಬ ರಾಜಕೀಯ ಮಾಡುವುದಿಲ್ಲ ಎಂದು ಬಿಜೆಪಿ ಹೇಳುತ್ತಲೇ ಕುಟುಂಬ ರಾಜಕೀಯ ಮಾಡುತ್ತಿದೆ. ಸಚಿವ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್‌ ಅವರಿಗೆ ಟಿಕೆಟ್ ಕೊಟ್ಟಿರುವುದಕ್ಕೆ ನನ್ನ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೇರೆ ಪಕ್ಷದಂತೆ ಕುಟುಂಬ ರಾಜಕೀಯ ಮಾಡುವುದಿಲ್ಲ ಎಂದು ಹೇಳಿಕೊಳ್ಳುವ ಬಿಜೆಪಿ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‌ಗೂ ಮತ್ತು ಈಗ ಬಿಜೆಪಿಗೂ ಇರು ವ್ಯತ್ಯಾಸವೇನು ಎಂದು ಅವರೇ ಹೇಳಲಿ ಎಂದರು.
ಆನಂದ್‌ ಸಿಂಗ್ ನನಗೆ ಸಹೋದರ ಇರಬಹುದು. ಆದರೆ, ನಾನು‌ ಮದುವೆಯಾಗಿದ್ದರಿಂದ ಸಂಬಂಧಿಗಳಾದರೂ ನನ್ನ ಕುಟುಂಬವೇ ಬೇರೆ, ಅವರ ಕುಟುಂಬವೇ ಬೇರೆ. ಆದರೆ ಪಕ್ಷದ ನಿಲುವು ನನಗೆ ಬಹಳಷ್ಟು ಬೇಸರ ತಂದಿದೆ. ಪಕ್ಷದಲ್ಲಿ ಇರಬೇಕೋ ಬೇಡವೋ ಎಂಬ ಬಗ್ಗೆ ನನ್ನ ಬೆಂಬಲಿಗರಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲಿಸಬೇಕೋ ಅಥವಾ ಪಕ್ಷೇತರನಾಗಿ ಕಣಕ್ಕಿಳಿಯ ಬೇಕೋ ಅಥವಾ ಬೇರೆ ನಿರ್ಧಾರ ತೆಗೆದುಕೊಳ್ಳಬೇಕೋ ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇನೆ. ನಾನು ಆನಂದ್‌ ಸಿಂಗ್ ಹಾಗೂ ಅವರ ಮಗನನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಆರ್‌ಪಿಪಿ ಪಕ್ಷಕ್ಕೆ ಹೋಗುವ ಸಾಧ್ಯತೆ…
ಇನ್ನೆರೆಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿರುವ ರಾಣಿ ಸಂಯುಕ್ತ ಅವರು ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement