ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಇಂದು ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿಯ 27 ಅಭ್ಯರ್ಥಿಗಳು, ಕಾಂಗ್ರೆಸ್ ನ 26, ಜೆಡಿಎಸ್-12, ಎಎಪಿ-10 ಹಾಗೂ ಪಕ್ಷೇತರರಾಗಿ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಯಶವಂತಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸಚಿವ ಎಸ್.ಟಿ.ಸೋಮಶೇಖರ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ರಾಧಾ, ಪುತ್ರ ನಿಶಾಂತ್, ಸೂಚಕರ ಜೊತೆ ಹೇರೋಹಳ್ಳಿಯ ಬಿಬಿಎಂಪಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನರಗುಂದ ಕ್ಷೇತ್ರದಿಂದ ಸಚಿವ ಸಿ.ಸಿ ಪಾಟೀಲ ನಾಮಪತ್ರ ಸಲ್ಲಿಸಿದರು. ಬಾಗಲಕೋಟೆ ಸಂಸದ ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಸಂಕನೂರು ಮತ್ತು ಮೊದಲಾದವರಿದ್ದರು.
ಕಡೂರು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ ಅವರು ಮೊದಲ ದಿನವೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪತ್ನಿ ಕವಿತಾ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಜೊತೆ ಕಡೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಚಿವ ಡಾ.ಕೆ ಸುಧಾಕರ ಕಟುಂಬದವರೊಂದಿಗೆ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಬೀಳಗಿಯಲ್ಲಿ ಸಾಂಕೇತಿಕವಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ್, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಮೊದಲಾದವರಿದ್ದರು.ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶಪ್ರಸಾದ ಅವರು ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಭವನದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.
ಕೋಲಾರದ ಮಾಲೂರು ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯಕುಮಾರ ಅವರು ನಾಮಪತ್ರ ಸಲ್ಲಿಸಿದ್ದಾರೆ. ನರಗುಂದದ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಮಾಜಿ ಸಚಿವ ಬಿಆರ್ ಯಾವಗಲ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 9 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿದೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಬುಧವಾರ ನಾಮಪತ್ರ ಸಲ್ಲಿಸಿದರು. ಮೈಸೂರು ಜಿಲ್ಲೆಯಲ್ಲಿ 16 ನಾಮಪತ್ರ ಸಲ್ಲಿಕೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ