ಕೈ ತಪ್ಪಿದ ಟಿಕೆಟ್​..: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಶಾಸಕ ನೆಹರೂ ಓಲೇಕಾರ, ಸಿಎಂ ಬೊಮ್ಮಾಯಿ ವಿರುದ್ಧ ಕಿಡಿ

ಹಾವೇರಿ : ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣ ಹಾಲಿ ಶಾಸಕ ನೆಹರೂ ಓಲೇಕಾರ ಸಹ ಬೆಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಹರೂ ಓಲೇಕಾರ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್‌ನಿಂದ ಆಹ್ವಾನ ಬಂದಿದೆ. ಕಾರ್ಯಕರ್ತರ ಜೊತೆ ಮಾತನಾಡಿ ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡತ ಬಿದ್ದಿದೆ. ತಮಗೆ ಅನುಕೂಲ ಆಗುವವರಿಗೆ ಟಿಕೆಟ್​ ಕೊಡಿಸಿದ್ದಾರೆ. ನನಗೆ ಟಿಕೆಟ್​ ತಪ್ಪಿಸುವ ಹುನ್ನಾರ ನಡೆಯಿತು. ಅವರ ಕೈ ಚೀಲ ಆದವರಿಗೆ ಮಾತ್ರ ಟಿಕೆಟ್​ ಕೊಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ ಅವರಿಂದ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದೆ. ಅವರಿಂದ ಬಿಜೆಪಿಗೆ ಹಾಳಾಗುತ್ತದೆ. 1500 ಕೋಟಿ ರೂ. ಖರ್ಚು ಮಾಡಿದ ನೀರಾವರಿಗೆ ಯೋಜನೆ ಸಂಪೂರ್ಣ ಹಾಳಾಗಿದೆ. ಅದರಲ್ಲಿ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿಸುತ್ತೇನೆ. ಹಗರಣ ಬಯಲಿಗೆಳೆಯುತ್ತೇನೆ. ಯಡಿಯೂರಪ್ಪ ಹೆಸರಿನಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾದವರು, ಈಗ ಅವರಿಗೇ ಮೋಸ ಮಾಡಿದ್ದಾರೆ ಎಂದು ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಈಗ ನನ್ನ ಬದಲಿಗೆ ಟಿಕೆಟ್​ ಪಡೆದ ಅಭ್ಯರ್ಥಿ ಎಂದೂ ಕೂಡ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಬೆರೆತವರಲ್ಲ. ಪಕ್ಷದ ಧ್ವಜ ಹಿಡಿದು ಕೆಲಸ ಮಾಡಿದವರಲ್ಲ. ನನ್ನ ಬೆಳವಣಿಗೆ ಸಹಿಸಲಾರದೆ ಅಂತಹವರಿಗೆ ಟಿಕೆಟ್​ ನೀಡಿದ್ದಾರೆ. ನನಗೆ ಟಿಕೆಟ್​ ಕೈ ತಪ್ಪಲು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಹಾವೇರಿ ಜಿಲ್ಲಾಧ್ಯಕ್ಷ ಸಿದ್ದರಾಜ​ ಕಲ್ಲಕೋಟಿ ಕಾರಣ. ಹಾವೇರಿಯಲ್ಲಿ ಅವರು ಎಷ್ಟು ಸ್ಥಾನ ಗೆಲ್ತಾರೆ ಎಂದು ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement