ಮಹಾಮಾನವತಾವಾದಿ-ನ್ಯಾಯ ಶಾಸ್ತ್ರಜ್ಞ-ಸಂಪಾದಕ-ಆರ್ಥಿಕ ತಜ್ಞ-ಸಮಾಜ ಸುಧಾರಕ-ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌

(೧೪-೦೪-೨೦೨೩ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ೧೩೨ನೇ ಜನ್ಮ ದಿನ, ಈ ನಿಮಿತ್ತ ಲೇಖನ)
ಜಾತಿಯತೆ, ಅಸ್ಪೃಶ್ಯತೆ, ಅವಮಾನ ಮತ್ತು ಹಸವಿನಿಂದ ಕಂಗಾಲಾಗಿದ್ದ ಶೋಷಿತ ವರ್ಗದ ಜನರ ಒಡಲಾಳದಲ್ಲಿ ಹುದುಗಿದ್ದ ಸ್ವಾಭಿಮಾನ ಹೊರತರಲು ಹಗಲು-ರಾತ್ರಿ ದುಡಿದು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದವರು ಸಂವಿಧಾನ ಶಿಲ್ಪಿ ಡಾ. ಭೀಮರಾವ್‌ ರಾಮರಾವ್‌ ಅಂಬೇಡ್ಕರ ಅವರು.
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೇವಾಡಿ ಗ್ರಾಮದ ಮಹಾರ್ ಸಮಾಜಕ್ಕೆ ಸೇರಿದ ಅವರು ಏಪ್ರಿಲ್‌ ೧೪, ೧೮೯೧ ರಂದು ಈಗಿನ ಮಧ್ಯಪ್ರದೇಶದ ರಾಜ್ಯದ ಮಾಹೋ (ಮಹಾವ್) ಎಂಬಲ್ಲಿ ಜನಿಸಿದರು. ಸದ್ಯ ಇದಕ್ಕೆ ಅಂಬೇಡ್ಕರ್ ನಗರ ಎಂದು ಹೆಸರಿಡಲಾಗಿದೆ. ಇವರ ತಂದೆ ರಾಮಜಿ ಮಾಲೋಜಿ ಸತ್ಪಾಲ್‌ ಹಾಗೂ ತಾಯಿ ಭೀಮಾಬಾಯಿ ಸತ್ಪಾಲ್. ಇವರ ಪೂರ್ವಜರಂತೆ ಇವರ ತಂದೆಯೂ ಕೂಡ ಬ್ರಿಟಿಶ್ ಸೇನೆಯಲ್ಲಿ ಸುಬೇದಾರರಾಗಿದ್ದರು. ರಾಮಜಿ ಸತ್ಪಾಲ್ ಮತ್ತು ಭೀಮಾಬಾಯಿ ದಂಪತಿಗೆ ಜನಿಸಿದ ೧೪ ಮಕ್ಕಳಲ್ಲಿ ಭೀಮರಾವ್ ಅಂಬೇಡಕರ್ ಅವರೇ ಕೊನೆಯ ಪುತ್ರರು.
೧೪ ಮಕ್ಕಳಲ್ಲಿ ಬದುಕುಳಿದವರು ಕೇವಲ ಐವರು ಮಾತ್ರ. ಮಂಜುಳಾ, ತುಳಸಿ, ಬಲರಾಮ, ಆನಂದರಾವ್‌, ಭೀಮರಾವ್ ಅವರು ಬದುಕುಳಿದರು. ಬಾಲಕ ಭೀಮರಾವ್ ೬ ವರ್ಷವದರಾಗಿದ್ದಾಗ ತಾಯಿ ಭೀಮಾಬಾಯಿ ಅನಾರೋಗ್ಯದಿಂದ ತೀರಿಕೊಂಡಾಗ, ಇವರ ಲಾಲನೆ-ಪಾಲನೆಯನ್ನು ಇವರ ಸೋದರತ್ತೆಯಾದ ಮೀರಾ ಅವರು ಮಾಡಿದರು.
ಅಸ್ಪೃಶ್ಯತೆಯ ಭಯಂಕರ ಅವಮಾನದ ನಡುವೆಯೇ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾತಾರದಲ್ಲಿ ಪೂರೈಸಿ, ಮುಂದೆ ಮಾಧ್ಯಮಿಕ, ಪ್ರೌಢಶಿಕ್ಷಣಕ್ಕಾಗಿ ಮುಂಬಯಿಯ ಎಲ್ಡಿನ್‌ಸನ್ ಸ್ಕೂಲಿಗೆ ಸೇರಿದರು. ಆದರೆ ಅಲ್ಲಿಯೂ ಸಹ ಅಸ್ಪೃಶ್ಯತೆಯ ಭೂತ ಬೆಂಬಿಡದೇ ಕಾಡಿತ್ತು. ಆದಾಗ್ಯೂ ಇವೆಲ್ಲವನ್ನು ಮೆಟ್ಟಿನಿಂತ ಅವರು ೧೯೦೭ ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದೂ ಸಂಪೂರ್ಣ ಮಹಾರ್ ಜಾತಿಯಲ್ಲಿಯೇ ಪ್ರಮುಖ ಸಾಧನೆಯಾಗಿತ್ತು. ತದನಂತರ ಕೇಲೂಸ್ಟರ್‌ ಗುರೂಜಿಯವರ ಸಹಕಾರ ಮತ್ತು ಬರೋಡಾ ಸಂಸ್ಥಾನದ ಮಹಾರಾಜ ಸಯ್ಯಾಜೀರಾವ್ ಗಾಯಕವಾಡ ಅವರ ಮಾಸಿಕ ೨೫ ರೂ.ಗಳ ಶಿಷ್ಯ ವೇತನದ ನೆರವಿನಿಂದ ೧೯೧೨ರಲ್ಲಿ ಮುಂಬೈನ ಎಲ್ಫಿನ್‌ಸನ್ ಕಾಲೇಜಿನಿಂದ ಮುಂಬೈ ವಿಶ್ವವಿದ್ಯಾಲಯದ ಆಧೀನ ಬಿ.ಎ. ಪದವಿಯನ್ನೂ ಪಡೆದರು. ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ ಬರೋಡಾ ಮಹಾರಾಜದ ಸಂಸ್ಥಾನದಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಉನ್ನತ ಶಿಕ್ಷಣ ಪ್ರೇಮಿಯಾಗಿದ್ದ ಇವರ ತಂದೆಗೆ ವೇದನೆಯಾಯಿತು. ಅವರು ತಮ್ಮ ಮಗ ಮತ್ತೂ ಓದಬೇಕು ಎಂದು ಬಯಸಿದ್ದರು. ಅವರ ತಂದೆ ೧೯೧೩ರಂದು ನಿಧನರಾದರು. ಅಂತಿಮ ಸಂಸ್ಕಾರಕ್ಕೆ ಬಂದ ಭೀಮರಾವ್‌ ಅವರು ತಂದೆಯ ಚಿತೆಯ ಎದುರಿಗೆ ಉನ್ನತ ಶಿಕ್ಷಣ ಪೂರೈಸುತ್ತೇನೆಂದು ಹೇಳಿ ವಗ್ದಾನ ಮಾಡಿ ನೌಕರಿಗೆ ತಿಲಾಂಜಲಿ ನೀಡಿದರು. ನಂತರ ಅಮೇರಿಕೆಯ ಕೋಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ, ೧೯೧೬ ರಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಪದವಿ ಪಡೆದು ಉನ್ನತ ವ್ಯಾಸಂಗಕ್ಕಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ತೆರಳಿ ಪದವಿ ಪಡೆದರು.

ಬ್ರಿಟಿಷರ ಆಡಳಿತ ಕಾಲದಲ್ಲಿ ಬಿ.ಆರ್. ಅಂಬೇಡ್ಕರ್ ಅವರು ವೈಸರಾಯ್ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಮುಂದೆ ಭಾರತ ಸ್ವತಂತ್ರಗೊಂಡಾಗ ಭಾರತದ ಪ್ರಥಮ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದರು.
ಅಸ್ಪೃಶ್ಯತೆಯ ವಿರುದ್ದ ಹೋರಾಟ :
೧೯೨೭ ರಿಂದ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ವಿರುದ್ಧ ಚಳುವಳಿ ಶುರು ಮಾಡಿದರು. ಸಾರ್ವಜನಿಕ ಕುಡಿಯುವ ನೀರಿನ ಸಂಪನ್ಮೂಲಗಳನ್ನು ದಲಿತರಿಗೂ ಉಪಯೋಗಿಸಲು ಬಿಡಿ ಎಂದು ಸಾರ್ವಜನಿಕ ಚಳುವಳಿ ಮತ್ತು ಮೆರವಣಿಗೆಗಳನ್ನು ಶುರು ಮಾಡಿದರು. ದೇವಸ್ಥಾನಗಳಲ್ಲಿ ದಲಿತರಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿದರು. ಇದಕ್ಕಾಗಿಯೇ ಮಹಾಡ್ ಎಂಬಲ್ಲಿ ಸತ್ಯಾಗ್ರಹ ಆರಂಭಿಸಿದರು. ಇದು ಇತಿಹಾಸದ ಪುಟಗಳಲ್ಲಿ ಮಹಾಡ್ ಸತ್ಯಾಗ್ರಹ ಎಂದು ದಾಖಲಾಗಿದೆ. ಲಕ್ಷಾಂತರ ಜನ ದಲಿತರು ಅಂದು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ಸಂವಿಧಾನ ಪಿತಾಮಹ :
೧೯೪೭ ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ ಅಂದಿನ ಕಾಂಗ್ರೆಸ್ ನೇತೃತ್ವದ ತಾತ್ಕಲಿಕ ಸರ್ಕಾರವು ಅಂಬೇಡ್ಕರ್ ಅವರನ್ನು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಲು ಆಹ್ವಾನಿಸಿತು. ನಂತರ ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ, ಸಮಿತಿಯ ಇತರ ಸದಸ್ಯರ ನೆರವಿನಿಂದ ವಿವಿಧ ದೇಶಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಭಾರತಕ್ಕಾಗಿ ನೂತನ ಸಂವಿಧಾನ ರಚಿಸಿದರು. ಹೀಗಾಗಿ ಇವರನ್ನು ನಮ್ಮ ಸಂವಿಧಾನದ ಪಿತಾಮಹ ಮತ್ತು ವಾಸ್ತುಶಿಲ್ಪಿ ಎಂದೂ ಕರೆಯಲಾಗುತ್ತದೆ.
ವೈವಾಹಿಕ ಜೀವನ :
ಡಾ.ಅಂಬೇಡ್ಕರ್ ಅವರು ೧೯೦೬ರಲ್ಲಿ ರಮಾಬಾಯಿ ಅವರನ್ನು ಮದುವೆಯಾದರು. ಪತಿಯ ಸಾಧನೆಗೆ ಬೆನ್ನೆಲಬಾಗಿದ್ದ ರಮಾಬಾಯಿ ೧೯೩೫ರಲ್ಲಿ ಅನಾರೋಗ್ಯದಿಂದಾಗಿ ನಿಧನರಾದರು. ದುಃಖದಿಂದ ಈ ಸಂಸಾರವನ್ನು ತ್ಯಜಿಸಿಲು ನಿರ್ಧರಿಸಿ ಕಾಷಾಯ ವಸ್ತ್ರ ಧರಿಸತೊಡಗಿದಾಗ ಜನ ಇವರನ್ನು ಪ್ರೀತಿಯಿಂದ ಬಾಬಾ ಸಾಹೇಬ ಎಂದು ಕರೆಯತೊಡಗಿದರು. ಆದರೆ ಕೆಲ ಹಿರಿಯರ ಸಲಹೆ ನಂತರ ಸಂಸಾರ ತ್ಯಜಿಸಿ ಬೈರಾಗಿಯಾಗಲು ನಿರ್ಧರಿಸಿದ್ದ ಅಂಬೇಡ್ಕರ ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ಅಸ್ಪೃಶ್ಯರ ಧ್ವನಿಯಾಗಿ ಕೊಲ್ಲಾಪುರ ಸಾಹೂ ಮಹಾರಾಜರ ನೆರವಿನಿಂದ ಮೂಕನಾಯಕ ಪತ್ರಿಕೆ ಆರಂಭಿಸಿದರು. ಅಸ್ಪೃಶ್ಯರ ಏಳ್ಗಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದರು.
೧೯೪೭ರ ನಂತರ ಅಂಬೇಡ್ಕರ್ ಅವರ ಆರೋಗ್ಯದಲ್ಲಿ ಏರು-ಪೇರು ಉಂಟಾದ ಕಾರಣ ತಮ್ಮ ಆರೈಕೆಗಾಗಿ ಜೀವನ ಸಂಗಾತಿಯ ಅವಶ್ಯಕತೆಯನ್ನು ಮನಗಂಡು ಪುನಃ ೧೯೪೮ರಲ್ಲಿ ಸವಿತಾ ಅವರೊಂದಿಗೆ ಎರಡನೇ ಮದುವೆಯಾದರು. ಇವರನ್ನು ಮಾಯಿ ಎಂದು ಕರೆಯಲಾಗುತ್ತಿತ್ತು. ಇವರು ೨೦೦೩ರ ರಲ್ಲಿ ನಿಧನರಾದರು.

ಪ್ರಮುಖ ಸುದ್ದಿ :-   200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !

ಅರ್ಥಶಾಸ್ತ್ರಜ್ಞ :
ಅಸ್ಪೃಶ್ಯರಿಗೆ ದೇಶ ಪರ‍್ಯಟನೆಯೇ ಅಸಾಧ್ಯವಾಗಿದ್ದ ಕಾಲದಲ್ಲಿ ವಿದೇಶಕ್ಕೆ ತೆರಳಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಭಾರತದ ಮೊದಲ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಭಾರತದಲ್ಲಿ ಕೃಷಿ ಬೆಳವಣಿಗೆ ಮತ್ತು ಕೈಗಾರಿಕರಣವು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಅದಕ್ಕೆ ಉತ್ತೇಜನ ನೀಡುವದು ಅಗತ್ಯ ಎಂಬುದು ಅಂಬೇಡ್ಕರರ ಅವರ ವಿಚಾರವಾಗಿತ್ತು.
ಶಿಕ್ಷಣ, ಸ್ವಚ್ಛತೆ, ಸಮುದಾಯ ಆರೋಗ್ಯ, ವಸತಿ, ಸೌಲಭ್ಯ, ಇವೆಲ್ಲವೂ ಪ್ರತಿಯೊಬ್ಬರಿಗೂ ಲಭಿಸಿ, ಸರ್ವರಿಗೂ ಸಮಪಾಲು ಸಮಬಾಳು ದೊರೆಯಬೇಕೆಂಬುದನ್ನು ಪ್ರತಿಪಾದಿಸಿದರು. ೧೯೫೬ ರಲ್ಲಿ ತಮ್ಮ ೫ ಲಕ್ಷ ಜನ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ನಾಗಪುರದಲ್ಲಿ ನಡೆದ ಬೃಹತ್ ಸಮ್ಮೇಳನದಲ್ಲಿ ಸೇರಿದರು.
ಜಾತಿ-ತಾರತಮ್ಯವು ಬಹುತೇಕ ರಾಷ್ಟ್ರವನ್ನು ಛಿದ್ರಗೊಳಿಸುತ್ತಿರುವುದನ್ನು ಗಮನಿಸಿದ್ದ ಅಂಬೇಡ್ಕರ್ ಅವರು ಅಸ್ಪೃಶ್ಯರು ಮತ್ತು ಇತರ ಶೋಷಿತ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ಪರಿಕಲ್ಪನೆಗೆ ಒಲವು ತೋರಿಸಿ ಅದಕ್ಕೊಂದು ಮೂರ್ತರೂಪ ನೀಡಿದರು.
ಅಂಬೇಡ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಅಸ್ಪೃಶ್ಯರ ಹಕ್ಕುಗಳ ಬದ್ಧತೆಯ ಕೊರತೆ ಬಗ್ಗೆ ಟೀಕೆ ಮಾಡಿದರು. ಮತ್ತು ೧೯೩೨ ರ ಪೂನಾ ಒಪ್ಪಂದದ ಫಲಿತಾಂಶದ ಬಗ್ಗೆ ಅಂಬೇಡ್ಕರ್ ಅವರು ಕಟುವಿಮರ್ಶಕರಾದರೂ ಕೂಡ ಗಾಂಧೀಜಿಯವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಂಬೇಡ್ಕರ್ ಅವರಿಗೆ, ಕಾನೂನು, ರಾಜಕೀಯ ಅಧಿಕಾರ ಮತ್ತು ಶಿಕ್ಷಣದಲ್ಲಿ ನಂಬಿಕೆ ಇತ್ತು.
ಮರಣ :
೬ ಡಿಸೆಂಬರ್ ೧೯೫೬ ರಂದು ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು.
ಭಾರತ ಸರ್ಕಾರವು ಇವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಿ ತನ್ನನ್ನು ತಾನು ಗೌರವಿಸಿಕೊಂಡಿದೆ.
ಅಂಬೇಡ್ಕರ್ ಅವರ ಪುಸ್ತಕ ಪ್ರೇಮ :
ಅಂಬೇಡ್ಕರ್ ಅವರ ಶಿಕ್ಷಣ ಮತ್ತು ವಿದ್ಯಾಭ್ಯಾಸದ ಕುರಿತಾಗಿ ಅಪಾರ ಪ್ರೇಮ ಹೊಂದಿದ್ದರು. ಬಾಲ್ಯದಲ್ಲಿ ಶಾಲೆಯಲ್ಲಿರುವಾಗ ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ತಮ್ಮನ್ನು ಅಸಹ್ಯವಾಗಿ ನೋಡುತ್ತಿದ್ದಾಗ ಫೆಂಡಸೇ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ ಸೂಕ್ಷ್ಮಬುದ್ಧಿ ಶಕ್ತಿ ಮತ್ತು ಕಲಿಯುವ ಹಂಬಲ ಗುರುತಿಸಿ ಪ್ರೋತ್ಸಾಹಿಸಿದರು. ಹೀಗಾಗಿ ಭೀಮರಾವ್ ರಾಮಜಿ ಅಂಬೇವಾಡಕರ್ ಎಂದಿದ್ದ ಅವರು ಹೆಸರು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ಬದಲಾಯಿತು.
ಡಾ. ಅಂಬೇಡ್ಕರ ಅಂದರೆ ಕೇವಲ ಸಂವಿಧಾನ ರಚನೆಗೆ, ಅಸ್ಪೃಶ್ಯರ, ದಲಿತರ ಎಳ್ಗಿಗೆಗೆ ಮಾತ್ರ ಶ್ರಮಿಸಿದವರಲ್ಲ. ಈ ನೆಲದ ಮನುಷ್ಯರೊಳಗಿನ ಅಮಾನವೀಯತೆಯನ್ನು ಮೂಲೋತ್ಪಟನೆ ಮಾಡಿ ಸಮಾನತೆಯನ್ನು ತರಬೇಕೆಂಬ ಹಂಬಲ ಹೊಂದಿದ ಮಹಾಮಾನವತಾ ವಾದಿಯಾಗಿದ್ದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಪದವಿ ಪೂರೈಸಿ ಭಾರತಕ್ಕೆ ಹಡಗಿನಲ್ಲಿ ಮರಳುವಾಗ ಇವರೊಂದಿಗೆ ೭೫,೦೦೦ ಪುಸ್ತಕಗಳೂ ಕೂಡ ಭಾರತಕ್ಕೆ ಬಂದಿದ್ದವು. ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತಿದ್ದ ಡಾ. ಅಂಬೇಡ್ಕರ್ ಅವರು ಅಚ್ಚು ಮೆಚ್ಚಿನ ಸಂಗಾತಿಗಳು ಪುಸ್ತಕಗಳೇ ಆಗಿದ್ದವು. ಇವರ ಮನೆಯೇ ಒಂದು ಬೃಹತ್ ಗ್ರಂಥಾಲಯವಾಗಿತ್ತು. ಮನೆಯ ೭೫% ಭಾಗಗದಲ್ಲಿ ಪುಸ್ತಕಗಳೇ ತುಂಬಿದ್ದವು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕುರಿತು ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿದ ಅವರು ಉನ್ನತ ಪಾಂಡಿತ್ಯ ಹೊಂದಿದ್ದ ವ್ಯಕ್ತಿಗಳ ಸಹಯೋಗದೊಂದಿಗೆ ನಮ್ಮ ದೇಶಕ್ಕೆ ಸಂವಿಧಾನ ನೀಡಿದ ವ್ಯಕ್ತಿಯಾಗಿದ್ದಾರೆ. ಪ್ರವಾಸ ಸಂದರ್ಭದಲ್ಲಿಯೂ ಹೊಸ ಹೊಸ ಗ್ರಂಥಗಳನ್ನು ಓದುತ್ತಿದ್ದರಲ್ಲದೆ, ತಾವು ಹೋದ ಕಡೆಗಳಲ್ಲಿ ಗ್ರಂಥಾಲಯಗಳಿಗೆ, ಪುಸ್ತಕಾಲಯಗಳಿಗೆ ಭೇಟಿ ನೀಡಿ ಪುಸ್ತಕ ಸಂಸ್ಕೃತಿಗೆ ಹೊಸ ಸ್ವರೂಪ ನೀಡಿದ್ದಾರೆ. ವಿವಿಧ ವಿಷಯಗಳ ಮೂಲ ಗ್ರಂಥಗಳನ್ನು ಅವರು ನಿರಂತರ ಅಧ್ಯಯನ ಮಾಡುತ್ತಿದ್ದರು. ೧೪೦ ಕ್ಕೂ ದೇಶಗಳ ಸಂವಿಧಾನಗಳ ಅಧ್ಯಯನ ಮಾಡಿದ ಶ್ರೇಯಸ್ಸು ಡಾ. ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಶಿಕ್ಷಣ ಯುವಕರಿಗೆ ಸಂಯಮ ಸೂಚಿಸಿದರೆ, ವೃದ್ಧರಿಗೆ ಬಲವರ್ಧನೆ, ಬಡವರಿಗೆ ಸಂಪತ್ತು ಮತ್ತು ಸಿರವಂತರಿಗೆ ಭೂಷಣ ಎನ್ನುತ್ತಾರೆ ಡಾ. ಬಿ. ಆರ್. ಅಂಬೇಡ್ಕರ . ಅವರ ಚಿಂತನೆಗಳು ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ.
ಡಾ. ಭೀಮರಾವ್‌ ರಾಮಜಿ ಅಂಬೇಡ್ಕರ್ ಭಾರತದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾಮಾನವತಾವಾದಿಯಾಗಿ, ನ್ಯಾಯಶಾಸ್ತ್ರಜ್ಞರಾಗಿ, ವಿದ್ವಾಂಸರಾಗಿ, ಸಂಪಾದಕರಾಗಿ, ಇತಿಹಾಸಕಾರರಾಗಿ, ಸಮಾಜಶಾಸ್ತ್ರಜ್ಞರಾಗಿ, ಆರ್ಥಿಕ ತಜ್ಞರಾಗಿ, ಚುನಾಯಿತ ಪ್ರತಿನಿಧಿಯಾಗಿ, ಸಮಾಜ ಸುಧಾರಕರಾಗಿ ಕಾರ್ಯ ಮಾಡಿದ್ದಾರೆ.
ಭಾರತೀಯ ಎಲ್ಲ ಭಾಷೆಗಳಲ್ಲಿ ಡಾ. ಅಂಬೇಡ್ಕರ್‌ ಅವರ ಜೀವನ ಮತ್ತು ಸಾಧನೆಗಳು ಕುರಿತು ಅಪಾರ ಸಾಹಿತ್ಯ ಪ್ರಕಟವಾಗಿದೆ. ಅವರ ಶಿಸ್ತು, ಅಧ್ಯಯನ ಶೀಲತೆ, ಬರವಣಿಗೆ, ವಸ್ತು ಸಂಹಿತೆ, ಅಚ್ಚುಕಟ್ಟುತನ, ದಾಖಲೆ ಮತ್ತು ಅಂಕಿ ಅಂಶಗಳೊಂದಿಗೆ ವಿಷಯ ಮಂಡನೆ, ಶ್ರದ್ಧೆ, ಕಾರ್ಯತತ್ಪರತೆ ನಮಗೆಲ್ಲ ಅನುಕರಣಿಯವಾಗಿದೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement