ಕರ್ನಾಟಕ ವಿಧಾನಸಭಾ ಚುನಾವಣೆ: 1,609 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ ಸಚಿವ ಎಂಟಿಬಿ ನಾಗರಾಜ

ಬೆಂಗಳೂರು: ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸಚಿವ ಎಂಟಿಬಿ ನಾಗರಾಜ ಅವರು ಒಟ್ಟು 1,609 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಅವರು ನಾಮಪತ್ರ ಸಲ್ಲಿಸಿದರು.
ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ, ತಮ್ಮ ಉದ್ಯೋಗವನ್ನು ಕೃಷಿ ಮತ್ತು ವ್ಯಾಪಾರ ಎಂದು ನಮೂದಿಸಿರುವ ನಾಗರಾಜ ಅವರು, ಗೃಹಿಣಿಯಾಗಿರುವ ಪತ್ನಿ ಎಂ.ಶಾಂತಕುಮಾರಿ ಅವರ ಜೊತೆಗೆ 536 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ದಂಪತಿ ಸ್ಥಿರಾಸ್ತಿ ಮೌಲ್ಯ 1,073 ಕೋಟಿ ರೂ., ಪ್ರಸ್ತುತ ವಿಧಾನ ಪರಿಷತ್‌ ಸದಸ್ಯರಾಗಿರುವ ನಾಗರಾಜ ಅವರು 2020ರ ಜೂನ್‌ನಲ್ಲಿ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದಾಗ ತಮ್ಮ ಪತ್ನಿಯೊಂದಿಗೆ ಸುಮಾರು 1,220 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.
ಓದಿರುವ ಎಂಟಿಬಿ ನಾಗರಾಜು (72) ತನ್ನ ಆದಾಯದ ಮೂಲವನ್ನು ಕೃಷಿ, ಮನೆ ಆಸ್ತಿ, ವ್ಯಾಪಾರ ಮತ್ತಿತರ ಮೂಲಗಳು ಎಂದು ತೋರಿಸಿದ್ದು, ಪತ್ನಿಯದ್ದು ಮನೆ ಆಸ್ತಿ ಹಾಗೂ ಇತರೆ ಮೂಲಗಳ ವಿವರ ನೀಡಿದ್ದಾರೆ.
ನಾಗರಾಜ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. 2019 ರಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಪಕ್ಷದಿಂದ ಪಕ್ಷಾಂತರಗೊಂಡ 17 ಶಾಸಕರಲ್ಲಿ ಅವರು ಒಬ್ಬರು. ನಂತರ ನಡೆದ ಉಪಚುನಾವಣೆಯಲ್ಲಿ ಅವರು ಹೊಸಕೋಟೆಯಿಂದ ಈಗ ಕಾಂಗ್ರೆಸ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸೋತರು. ಕಡುವೈರಿಯಾಗಿ ಕಣಕ್ಕಿಳಿದಿದ್ದ ಇಬ್ಬರೂ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ ವ್ಯಕ್ತಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement