ಬಿಜೆಪಿ ಶಾಸಕ ರಾಮದಾಸಗೆ ಕೈತಪ್ಪಿದ ಟಿಕೆಟ್; ಮಾತುಕತೆಗೆ ಬಂದಿದ್ದ ಪ್ರತಾಪ ಸಿಂಹ ಬರಿಗೈಲಿ ವಾಪಸ್‌

ಮೈಸೂರು: ಬಿಜೆಪಿಯ ಬಂಡಾಯ ಬಿಸಿ ಮೂರನೇ ಪಟ್ಟಿಗೂ ಮುಂದುವರಿದಿದೆ. ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಾಲಿ ಶಾಸಕ ಎಸ್.ಎ. ರಾಮದಾಸ ಅವರಿಗೆ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಮುಂದಿನ ನಿರ್ಧಾರದ ಕುರಿತು ಚರ್ಚಿಸಲು ಹಾಲಿ ಶಾಸಕ ರಾಮದಾಸ ಅವರ ಬೆಂಬಲಿಗರು ಸಭೆ ನಡೆಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಕ್ಷದ ಅನೇಕ ನಾಯಕರು ಟಿಕೆಟ್‌ ವಿಚಾರವಾಗಿ ಅಸಮಾಧಾನಗೊಂಡು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಬಿಜೆಪಿಯ ಘೋಷಿತ ಅಭ್ಯರ್ಥಿ ಶ್ರೀವತ್ಸ ಮತ್ತು ಸಂಸದ ಪ್ರತಾಪ ಸಿಂಹ ಅವರು ಸೇರಿದಂತೆ ಕೆಲವರು ರಾಮದಾಸಅವರ ಮನವೊಲಿಸಲು ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಅಲ್ಲಿ ರಾಮದಾಸ ಅವರು ಅವರನ್ನು ಭೇಟಿಯಾಗದ ಕಾರಣ ಬರಿಗೈಲಿ ವಾಪಸ್ ಆಗಿದ್ದಾರೆ.
ಸಂಧಾನಕ್ಕೆ ಯತ್ನಿಸಿದ್ದ ಪ್ರತಾಪ ಸಿಂಹ ಅವರಿಗೆ ಕೊನೆಗೆ ರಾಮದಾಸ ಭೇಟಿಯೂ ಸಾಧ್ಯವಾಗಲಿಲ್ಲ. ಸುಮಾರು 30 ನಿಮಿಷ ಕಾದು ನಿಂತ ಪ್ರತಾಪ ಸಿಂಹ ಹಾಗೂ ಶ್ರೀವತ್ಸ ಅವರು ಬರಿಗೈಲಿ ವಾಪಸ್‌ ಹೋಗಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸದಲ್ಲಿ ಸೋಮವಾರ ಸಂಜೆ ಮಾತನಾಡಿದ ರಾಮದಾಸ, “30 ವರ್ಷದಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಆ ಮನೆಯಲ್ಲಿ ಇರಬೇಕಾ? ಬೇಡವಾ? ಎಂಬುದರ ಬಗ್ಗೆ ಮಂಗಳವಾರ ಸಂಜೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
ರಾಮದಾಸ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕರ ವಿದ್ಯಾರಣ್ಯಪುರಂ ನಿವಾಸದಲ್ಲಿ ಸಭೆ ಸೇರಿದ್ದ ಬೆಂಬಲಿಗರು, ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ.
ರಾಮದಾಸ ಭೇಟಿ ವಿಫಲವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಟಿಕೆಟ್ ಕೈತಪ್ಪಿದ್ದಕ್ಕೆ ರಾಮದಾಸ ಅವರಿಗೆ ನೋವಾಗಿದೆ. 30 ವರ್ಷಗಳಿಂದ ಪಕ್ಷದಲ್ಲಿ ಇದ್ದು, ಟಿಕೆಟ್ ‘ಮಿಸ್’ ಆದಾಗ ಬೇಸರ ಆಗೋದು ಸಹಜ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement