ಟ್ವಿಟರ್‌ ಖಾತೆ ನಿರ್ಬಂಧ ಪ್ರಕರಣ : ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು; ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶವನ್ನು ಕಾಯ್ದಿರಿಸಿದೆ.
ಕೇಂದ್ರ ಸರ್ಕಾರದ 10 ನಿರ್ಬಂಧ ಆದೇಶ ಮತ್ತು 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ನಿರ್ದೇಶಿಸಿರುವುದನ್ನು ಪ್ರಶ್ನಿಸಿ ಟ್ವಟರ್‌ ಸಲ್ಲಿಸಿರುವ ಅರ್ಜಿಯ ಕುರಿತು ಟ್ವಿಟರ್‌ ಮತ್ತು ಕೇಂದ್ರ ಸರ್ಕಾರದ ವಾದವನ್ನು ವಿಸ್ತೃತವಾಗಿ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರಿದ್ದ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. ಒಟ್ಟು 1,474 ಖಾತೆಗಳು ಮತ್ತು 175 ಟ್ವೀಟ್‌ಗಳ ಪೈಕಿ 39 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿರುವ ಆದೇಶವನ್ನು ಟ್ವಿಟರ್‌ ಪ್ರಶ್ನಿಸಿದೆ.
ವರದಿ ಪ್ರಕಾರ, ಕೇಂದ್ರ ಸರ್ಕಾರದ ಪರ ವಕೀಲರು “ಟ್ವಿಟರ್ ತನ್ನ ಬಳಕೆದಾರರ ಪರವಾಗಿ ಸಮರ್ಥಿಸುವ ಹಕ್ಕನ್ನು ಹೊಂದಿಲ್ಲ. ಹೀಗೆ ಮಾಡಲು ಶಾಸನದ ಬೆಂಬಲ ಅಗತ್ಯವಿದೆ. ಕೇಂದ್ರ ಸರ್ಕಾರವು ಸ್ವೇಚ್ಛೆಯಿಂದ ನಡೆದುಕೊಂಡರೆ ಮಾತ್ರ ಸಂವಿಧಾನದ 14ನೇ ವಿಧಿ ಅಡಿ ಹಕ್ಕು ಉಲ್ಲಂಘನೆ ಉಲ್ಲೇಖಿಸಿ ಟ್ವಿಟರ್‌ ನ್ಯಾಯಾಲಯದ ಕದತಟ್ಟಬಹುದು.ಸುಳ್ಳು ಸುದ್ದಿ ಮತ್ತು ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್‌ನಂಥ ವೇದಿಕೆಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ದೇಶದ ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಸೂಕ್ಷ್ಮ ವಿಚಾರಗಳು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗುತ್ತದೆ. ನ್ಯಾಯಸಮ್ಮತ ಅಭಿಪ್ರಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಒಪ್ಪಿಗೆ ಇದ್ದರೂ ವ್ಯಂಗ್ಯದ ರೂಪದಲ್ಲಿನ ಟ್ವೀಟ್‌ಗಳು ಮತ್ತು ಮಾಹಿತಿಗಳು ಟ್ವಿಟರ್‌ನಲ್ಲಿ ವ್ಯಾಪಕವಾಗಿವೆ ಎಂದು ತಿಳಿಸಿದ್ದರು.
ಟ್ವಿಟರ್‌ ಪರ ವಕೀಲರು “ಟ್ವಿಟರ್‌ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ನೂರಾರು, ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕಾನೂನಿನ ಅನ್ವಯ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ. ಆದರೆ, ತಮ್ಮ ಟ್ವಿಟರ್‌ ಹ್ಯಾಂಡಲ್‌ ನಿರ್ಬಂಧವಾದುದ್ದಕ್ಕೆ ವ್ಯಕ್ತಿಗತವಾಗಿ ಬಳಕೆದಾರರಿಗೆ ಯಾವುದೇ ಪರಿಹಾರ ಇರುವುದಿಲ್ಲ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ನಿರ್ಬಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. 1000ಕ್ಕೂ ಅಧಿಕ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಸರ್ಕಾರ ಆದೇಶ ಮಾಡಿದೆ. ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ ಎಂದು ವಾದಿಸಿದ್ದರು.
ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಿದರೆ ನಾವು ಬಳಕೆದಾರರಿಗೆ ಉತ್ತರಿಸಬೇಕಾಗುತ್ತದೆ. ಸ್ವಾಭಾವಿಕ ನ್ಯಾಯದ ಅನ್ವಯ ಬಳಕೆದಾರರೊಬ್ಬರು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರೆ ಅವರಿಗೆ ಅದನ್ನು ತಿಳಿಸಿದ ಬಳಿಕ ಅವರ ಖಾತೆಯನ್ನು ನಿರ್ಬಂಧಿಸಬೇಕಾಗುತ್ತದೆ. ಹೀಗಾಗಿ, ಏತಕ್ಕಾಗಿ ನಿರ್ದಿಷ್ಟ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾರಣ ನೀಡಬೇಕು. ಸದ್ಯದ ಕೇಂದ್ರ ಸರ್ಕಾರ ಆದೇಶ ಪಾಲಿಸಿದರೆ ಟ್ವಿಟರ್‌ ಉದ್ಯಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement