ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ; 5ನೇ ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಬೇಟೆಗೆ ನಿಂತಿರುವ ಕಾಂಗ್ರೆಸ್, 5ನೇ ಗ್ಯಾರಂಟಿ ಯೋಜನೆ ಘೋಷಿಸಿದೆ. 5ನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಸೌಲಭ್ಯ ನೀಡುವುದಾಗಿ ಘೋಷಿಸಿದೆ.
ಇದು ಮಹಿಳೆಯರಿಗಾಗಿಯೇ ಘೋಷಿಸಿರುವ ಕಾಂಗ್ರೆಸ್‌ನ ಎರಡನೇ ದೊಡ್ಡ ಘೋಷಣೆಯಾಗಿದೆ. ಈ ಮೊದಲು ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಘೋಷಿಸಿತ್ತು.
ಗುರುವಾರ (ಏಪ್ರಿಲ್‌ 27) ಮಂಗಳೂರಿನಲ್ಲಿ ಐದನೇ ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯವನ್ನು ಅನುಮೋದಿಸಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಉಳಿದ ನಾಲ್ಕು ಗ್ಯಾರಂಟಿ ಘೋಷಣೆಗಳು
ಗೃಹ ಜ್ಯೋತಿ ಯೋಜನೆ: ಕಾಂಗ್ರೆಸ್ ಈ ವರ್ಷದ ಜನವರಿಯಲ್ಲಿ ತಮ್ಮ ಮೊದಲ ಭರವಸೆಯಾಗಿ ಗೃಹ ಜ್ಯೋತಿ ಯೋಜನೆಯಡಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದೆ.
ಗೃಹ ಲಕ್ಷ್ಮೀ ಯೋಜನೆ : ಕಾಂಗ್ರೆಸ್‌ ತನ್ನ ಎರಡನೇ ಚುನಾವಣಾ ಭರವಸೆಯಲ್ಲಿ, ಕಾಂಗ್ರೆಸ್ ಗೃಹ ಲಕ್ಷ್ಮೀ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2000 ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದೆ. ಈ ಯೋಜನೆಯಂತೆ ಕುಟುಂಬದ ಮುಖ್ಯಸ್ಥಳಾಗಿರುವ ಮಹಿಳೆಗೆ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

ಅನ್ನ ಭಾಗ್ಯ : ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಜಾರಿ ತಂದಿದ್ದ ಅನ್ನಭಾಗ್ಯ ಯೋಜನೆ ಪುನರಾರಂಭಿಸುವುದಾಗಿ ವಾಗ್ದಾನ ನೀಡಿದೆ. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ.
ಯುವ ನಿಧಿ: ನಿರುದ್ಯೋಗಿ ಯುವಕರಿಗೆ ನೆರವಾಗಲು ಯುವ ನಿಧಿ ಯೋಜನೆ ಅಡಿಯಲ್ಲಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುತ್ತದೆ.ಅಲ್ಲದೆ, ರಾಜ್ಯದಲ್ಲಿ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಭತ್ಯೆಯಾಗಿ ಪ್ರತಿ ತಿಂಗಳು 1500 ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement