ತಲೆಗೆ ಕಲ್ಲೇಟು ಬಿದ್ದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ

ತುಮಕೂರು : ನಿನ್ನೆ ಪ್ರಚಾರದ ವೇಳೆ ಕಲ್ಲೇಟು ಬಿದ್ದು ತಲೆಗೆ ಗಾಯಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು, ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಡಾ.ಜಿ.ಪರಮೇಶ್ವರ ಅವರು, ನಿನ್ನೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ವೇಳೆ ನನ್ನನ್ನ ಮೇಲಕ್ಕೆ ಎತ್ತಬೇಡಿ ಎಂದೆ. ಆದರೂ ಕಾರ್ಯಕರ್ತರು ಎತ್ತುಕೊಂಡರು ಜೆಸಿಬಿ ಮೂಲಕ ಹೂ ಹಾಕಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಅವರು ಮೇಲಕ್ಕೆ ಎತ್ತಿದಾಗ ತಲೆಗೆ ಏನೋ ಬಡಿದಂತಾಯ್ತು. ಹೂ ಹಾರ ಕೆಂಪು ಹೂವಿಂದ ಮಾಡಿದ್ದಾಗಿದ್ದರಿಂದ ಯಾರಿಗೂ ಏನಾಯಿತೆಂದು ಗೊತ್ತಾಗಲಿಲ್ಲ. ತಲೆಗೆ ಕಲ್ಲು ಬೀಳುತ್ತಿದ್ದಂತೆ ಕೂಗಿಕೊಂಡ ನಂತರ ಕೆಳಗಿ ಇಳಿಸಿದರು ಎಂದು ಘಟನೆ ಬಗ್ಗೆ ಹೇಳಿದರು.

ನನ್ನ ತಲೆಯಲ್ಲಿ ರಕ್ತ ಬರಲು ಶುರುವಾಯಿತು. ತುಂಬಾ ರಕ್ತ ಬಂತು. ನಮ್ಮ ಆಸ್ಪತ್ರೆ ವೈದ್ಯರು ನನ್ನ ಭೇಟಿ ಮಾಡಲು ಅಲ್ಲಿಗೆ ಬಂದಿದ್ದರು. ಅವರು ತಕ್ಷಣ ಚಿಕಿತ್ಸೆ ನೀಡಿದರು. ಬಳಿಕ ಅಕ್ಕಿರಾಂಪುರದ ಆರೋಗ್ಯ ಕೇಂದ್ರಕ್ಕೆ ಕರೆತಂದರು ಎಂದು ಹೇಳಿದರು.
ಹೂವಿನಲ್ಲಿ ಕಲ್ಲು ಬಂದಿದ್ದಲ್ಲ. ಯಾರೋ ದುಷ್ಕರ್ಮಿಗಳು ಅದನ್ನು ಎಸೆದಿದ್ದಾರೆ. ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ವಿರೋಧಿಗಳು ಬಹಳ ಕಡಿಮೆ. ಆದರೆ ದ್ವೇಷ ಇದ್ದರೂ ಈ ರೀತಿಯಲ್ಲಿ ಯಾರೂ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಆಸ್ಪತ್ರೆಗೆ ತೆರಳಿದೆ. ಡಿ.ಕೆ ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ಧರಾಮಯ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಾಂತಿಯಿಂದ ಚುನಾವಣೆ ಎದುರಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಈ ಘಟನೆ ಬಗ್ಗೆ ತನಿಖೆ ಮಾಡಲು ಎಸ್ಪಿ ಅವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
1999 ರಲ್ಲಿ ನನಗೆ ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿದ್ದರು. ಪದೇ ಪದೇ ಇಂತಹ ಘಟನೆಗಳು ಯಾಕೆ ಆಗುತ್ತಿವೆ ಗೊತ್ತಿಲ್ಲ. ತನಿಖೆ ಮಾಡಿ ಘಟನೆ ಬಗ್ಗೆ ಸತ್ಯಾಸತ್ಯತೆ ಬಗ್ಗೆ ತಿಳಿಸಲು ಸೂಚಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement