ವಿದೇಶದಿಂದಲೇ ಮತದಾನಕ್ಕೆ ಅವಕಾಶ ನೀಡಲು ಮನವಿ : ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು: ಕರ್ನಾಟಕದಲ್ಲಿ ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ತಾವು ನೆಲೆಸಿರುವ ದೇಶದಿಂದಲೇ ಅನಿವಾಸಿ ಭಾರತೀಯರಿಗೆ ಮತದಾನ ಮಾಡಲು ಅನುವು ಮಾಡಿಕೊಡಬೇಕು ಎಂದು ಕೋರಿ ಅನಿವಾಸಿ ಭಾರತೀಯರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.
ʼಸಾಗರೋತ್ತರ ಕನ್ನಡಿಗರುʼ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿರುವ ಇಂಗ್ಲೆಂಡ್‌ನಲ್ಲಿರುವ ಮೈಸೂರಿನವರಾದ ಎಂ. ರವಿ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ ಎ. ಪಾಟೀಲ ಅವರಿದ್ದ ರಜಾಕಾಲೀನ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಮತದಾನದ ಬೂತ್‌ ತೆರೆಯುವ ಮೂಲಕ ಅಥವಾ ಅಂಚೆ ಮೂಲಕ ಮತದಾನ ಮಾಡಲು ಅನುವು ಮಾಡಿಕೊಡಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಕೋರಿರುವುದಾಗಿ ಅನಿವಾಸಿ ಭಾರತೀಯರಾಗಿರುವ 2009ರಿಂದ ನೋಂದಾಯಿತ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ರವಿ ಅವರು ಮನವಿ ಅರ್ಜಿಯಲ್ಲಿ ಹೇಳಿದ್ದರು.
ತಾನು ಭಾರತೀಯ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿ ಹೊಂದಿದ್ದು, ವಿಶ್ವದಾದ್ಯಂತ ಕೆಲಸ ಮಾಡುತ್ತಿರುವ 60 ಲಕ್ಷ ಭಾರತೀಯರು ಅರ್ಹ ಮತದಾರರಾಗಿದ್ದಾರೆ. ಹಲವರು ಕುಟುಂಬದ ಜೊತೆ ನೆಲೆಸಿದ್ದು, ಮತ್ತಷ್ಟು ಜನರು ವಿಶ್ವದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶ ಕಲ್ಪಿಸದಿರುವಾಗ ಮತದಾನದ ಹಕ್ಕನ್ನು ಕೋರಲಾಗದು ಎಂಬ ಭಾರತೀಯ ಚುನಾವಣಾ ಆಯೋಗದ ವಾದ ಮಂಡಿಸಿತು. ನ್ಯಾಯಾಲಯ ಅದನ್ನು ಪುರಸ್ಕರಿಸಿತು. ಅರ್ಜಿಯನ್ನು ವಜಾ ಮಾಡಿತು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement