ಪಾಕಿಸ್ತಾನ ಜೈಲಿನಲ್ಲಿರುವ 199 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧಾರ

ಕರಾಚಿ: ಪಾಕಿಸ್ತಾನದ ಸಾಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ 199 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ.
ಕರಾಚಿಯ ಲಾಂಧಿ ಸೆರೆಮನೆಯಲ್ಲಿ 199 ಭಾರತೀಯ ಮೀನುಗಾರರನ್ನು ಬಂಧಿಸಿ ಇರಿಸಲಾಗಿದೆ. ಈ ಮೀನುಗಾರರನ್ನು ಬಿಡುಗಡೆ ಮಾಡಿ ಶುಕ್ರವಾರ(ಮೇ 12)ರಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ.
ಆದರೆ ಬಿಡುಗಡೆಗೊಳ್ಳಬೇಕಿದ್ದ ಜುಲ್ಫಿಕರ್ ಎಂಬ ಮೀನುಗಾರನೊಬ್ಬ ಅನಾರೋಗ್ಯದಿಂದ ಶನಿವಾರ ಕರಾಚಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಿಡುಗಡೆಯಾಗುತ್ತಿರುವ ಭಾರತೀಯ ಮೀನುಗಾರರ ಜೊತೆ ಜುಲ್ಫಿಕರ್ ಮೃತದೇಹವನ್ನು ಸಹ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.
ಕರಾಚಿ ಜೈಲಿನಲ್ಲಿ ಇನ್ನೂ 654 ಭಾರತೀಯ ಮೀನುಗಾರರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement