ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಈವರೆಗಿನ ಮುನ್ನಡೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 118 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಜೆಪಿ 68 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 127 ಕ್ಷೇತ್ರಗಳಲ್ಲಿ ಜೆಡಿಎಸ್ ೨೭ ಹಾಗೂ ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿರುವುದಾಗಿ ತಿಳಿದು ಬಂದಿದೆ.
224 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ರಚನೆಗಾಗಿ ಮ್ಯಾಜಿಕ್ ಸಂಖ್ಯೆ 113 ಬೇಕಾಗಿದೆ.. ಈಗ ಕಾಂಗ್ರೆಸ್ ಆ ಗಡಿಯನ್ನು ದಾಟಿದ್ದು, ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹೆಜ್ಜೆ ಇಡುತ್ತಿದ್ದಂತೆ, ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಇಂದು, ಶನಿವಾರ ಸಂಜೆ 8ಕ್ಕೆ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕೂಡ ಕರೆಯಲಾಗಿದೆ.
ಬೊಮ್ಮಾಯಿಗೆ ಗೆಲುವು….
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸುಲಭದ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ವಿರುದ್ಧ ಸುಮಾರು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಬಿ.ಶ್ರೀರಾಮುಲು ಸೋಲು
ಮೊಳಕಾಲ್ಮೂರು ಕ್ಷೇತ್ರ ಬಿಟ್ಟು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿದ್ದ ಸಚಿವ ಶ್ರೀರಾಮುಲು ಹಿನ್ನಡೆ ಅನುಭವಿಸುತ್ತಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು 22,729 ಮತಗಳ ಅಂತರದಿಂದ ಹಿಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರು ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಿಂತ 36 ಸಾವಿರ ಮತಗಳಿಂದ ಮುನ್ನಡೆ ಪಡೆದಿದ್ದಾರೆ ಎಂದು ಮಾಹಿತಿ ದೊರಕಿದೆ.
ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರಗೆ ಹಿನ್ನಡೆ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಸುಧಾಕರ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರದೀಪಕುಮಾರ ಮುನ್ನಡೆ ಸಾಧಿಸಿದ್ದಾರೆ. ಈವರೆಗೆ ಸುಧಾಕರ್ 19951 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 22689 ಮತಗಳನ್ನು ಪಡೆದಿದ್ದಾರೆ.
ಸಿ.ಟಿ.ರವಿಗೆ ಹಿನ್ನಡೆ…
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಸಿ.ಟಿ.ರವಿಗೆ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ತಮ್ಮಯ್ಯ ಭಾರಿ ಮುನ್ನಡೆ ಸಾಧಿಸಿದ್ದಾರೆ. ಈವರೆಗೆ ಸಿ.ಟಿ.ರವಿ 11953 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ಸಿನ ತಮ್ಮಯ್ಯ ಅವರು 12765 ಮತಗಳನ್ನು ಪಡೆದಿದ್ದಾರೆ.
ನಿಖಿಲಕುಮಾರಸ್ವಾಮಿಗೆ ಹಿನ್ನಡೆ….
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಭಾರೀ ಹಿನ್ನಡೆಯಲಿದ್ದಾರೆ. 11ನೇ ಸುತ್ತಿನ ಮತ ಎಣಿಕೆಯ ವೇಳೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮುನ್ನಡೆ ಹೊಂದಿದ್ದಾರೆ.
ರಾಮನಗರ ಕ್ಷೇತ್ರದಿಂದ ಗೆದ್ದು ಶಾಸಕಿಯಾಗಿದ್ದಂತ ಅನಿತಾ ಕುಮಾರಸ್ವಾಮಿ, ಪುತ್ರನಿಗಾಗಿ ಕ್ಷೇತ್ರಬಿಟ್ಟುಕೊಟ್ಟು, ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 14,300 ಮತಗಳ ಅಂತರದಿಂದ ಹಿನ್ನಲೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಜಗದೀಶ ಶೆಟ್ಟರಗೆ ಹಿನ್ನಡೆ..….
ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಭಾರಿ ಹಿನ್ನಡೆಯಲ್ಲಿದ್ದಾರೆ. ಹಾಲಿ ಅವರು ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ.
ಅಥಣಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಅವರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಹೆಚ್ಚಿನ ಸಚಿವರು ಹಿನ್ನಡೆಯಲ್ಲಿದ್ದಾರೆ. ಹಿರೆಕೆರೂರಿನಲ್ಲಿ ಬಿ.ಸಿ.ಪಾಟೀಲ, ಯಶವಂತಪುರದಲ್ಲಿ ಬಿ.ಸೋಮಶೇಖರ, ತುಮಕೂರಿನಲ್ಲಿ ಬಿ.ಸಿ.ನಾಗೇಶ, ನಾರಾಯಣ ಗೌಡ ಮೊದಲಾದವರು ಹಿನ್ನಡೆ ಅನುಭವಿಸಿದ್ದಾರೆ. ಮತ್ತೊಬ್ಬ ಸಚಿವರಾದ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಹಿಂದಿದ್ದಾರೆ. ವರುಣಾದಲ್ಲಿ ಸೋಮಣ್ಣ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು 5,30,85,566 ಮತದಾರರ ಪೈಕಿ 3,88,51,807 ಜನರಿಂದ ಮತದಾನ. 26682156 ಪುರುಷರ ಪೈಕಿ 19658398 ಪುರುಷರು ಹಕ್ಕು ಚಲಾವಣೆ ಮಾಡಿದ್ದಾರೆ. 26398483 ಮಹಿಳಾ ಮತದಾರರ ಪೈಕಿ 19192372 ಮಹಿಳೆಯರಿಂದ ಮತದಾನವಾಗಿದ್ದು, 4927 ಮಂಗಳಮುಖಿಯರ ಪೈಕಿ 1037 ಮಂಗಳಮುಖಿಯರಿಂದ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇ. 73.19ರಷ್ಟು ಮತಚಲಾವಣೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ