ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.)ವು ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಬುಧವಾರ ಅವರನ್ನು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ಸಚಿವರನ್ನು ಬಂಧಿಸಲಾಗಿದೆ.
ವಿಚಾರಣೆಗಾಗಿ ಬುಧವಾರ ಬೆಳ್ಳಂಬೆಳಗ್ಗೆ ಇ.ಡಿ. ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಳ್ಳುವಾಗ ಅವರು ಗಳಗಳನೆ ಅತ್ತರು.
ಇದಕ್ಕೂ ಮುನ್ನ ಅಸ್ವಸ್ಥಗೊಂಡ ಸಚಿವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳ್ಳಂಬೆಳಗ್ಗೆ ಬಾಲಾಜಿ ಎದೆನೋವು ಎಂದು ದೂರಿದ ನಂತರ ಇಡಿ ಬಾಲಾಜಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಬುಧವಾರ ಮುಂಜಾನೆ ಸೆಂಥಿಲ್ ಬಾಲಾಜಿ ಅವರನ್ನು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ಡಿಎಂಕೆ ಮುಖಂಡರು ತಿಳಿಸಿದ್ದಾರೆ.
ಡಿಎಂಕೆ ನಾಯಕನನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ಅವರ ಬೆಂಬಲಿಗರು ಇ.ಡಿ. ಕ್ರಮವನ್ನು ವಿರೋಧಿಸಿ ಅಲ್ಲಿ ಜಮಾಯಿಸಿದರು. ಅವರು ಕಾರಿನಲ್ಲಿ ಮಲಗಿದ್ದಾಗ ನೋವಿನಿಂದ ಅಳುತ್ತಿರುವುದು ಕಂಡುಬಂದಿದೆ.
‘ಕಾನೂನು ಬದ್ಧವಾಗಿ ಹೋರಾಡುತ್ತೇವೆ’
“ಸೆಂಥಿಲ್ ಬಾಲಾಜಿ ಅವರನ್ನು ಕರೆದುಕೊಂಡ ಹೋದ ಇ.ಡಿ ಆಸ್ಪತ್ರೆಗೆ ಕರೆತಂದಿದೆ. ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಪ್ರಜ್ಞೆ ಇರಲಿಲ್ಲ ಎಂದು ತೋರುತ್ತದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಬಂಧನವಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ” ಎಂದು ಸೆಂಥಿಲ್ ಬಾಲಾಜಿ ವಕೀಲರು ಮತ್ತು ಡಿಎಂಕೆ ನಾಯಕ ಎನ್ ಆರ್ ಎಲಾಂಗೋ ತಿಳಿಸಿದ್ದಾರೆ.
ಸೆಂಥಿಲ್ ಬಾಲಾಜಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ನಾವು ಈ ವಿಷಯವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆದರಿಕೆ ರಾಜಕೀಯಕ್ಕೆ ನಾವು ಹೆದರುವುದಿಲ್ಲ ಎಂದು ಅವರು ಹೇಳಿದರು.
“ಸೆಂಥಿಲ್ ಬಾಲಾಜಿ ಅವರನ್ನು ಗುರಿಯಾಗಿಸಿ ಚಿತ್ರಹಿಂಸೆ ನೀಡಲಾಯಿತು. ಇಡಿ ಅವರನ್ನು 24 ಗಂಟೆಗಳ ಕಾಲ ನಿರಂತರವಾಗಿ ಪ್ರಶ್ನಿಸುತ್ತಲೇ ಇತ್ತು. ಇದು ಸಂಪೂರ್ಣವಾಗಿ ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ಅವರು (ಇಡಿ) ಇದಕ್ಕಾಗಿ ಜನರು ಮತ್ತು ನ್ಯಾಯಾಲಯಕ್ಕೆ ಉತ್ತರಿಸಬೇಕು” ಎಂದು ತಮಿಳುನಾಡು ಕಾನೂನು ಸಚಿವ ಎಸ್ ರಘುಪತಿ ಹೇಳಿದ್ದಾರೆ.
ಸ್ಟಾಲಿನ್ ಸಭೆ
ಸೆಂಥಿಲ್ ಬಾಲಾಜಿ ಬಂಧನದ ನಂತರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹಿರಿಯ ಸಚಿವರು ಮತ್ತು ಕಾನೂನು ತಜ್ಞರ ಜೊತೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದರು. ತನಿಖಾ ಸಂಸ್ಥೆ ನಡೆಸಿದ ದಾಳಿಗಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಹಲವಾರು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಗಿವೆ.
ರಾಜ್ಯ ಸಚಿವ ಪಿ ಕೆ ಸೇಕರ್ ಬಾಬು ಅವರು ಬಾಲಾಜಿ ಅವರಿಗೆ ಚಿತ್ರಹಿಂಸೆ ನೀಡಿರುವ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಸಚಿವರನ್ನು ಇ.ಡಿ. ಕಸ್ಟಡಿಗೆ ತೆಗೆದುಕೊಂಡಿದೆ ಎಂಬ ಊಹಾಪೋಹಗಳಿದ್ದರೂ, ಯಾವುದೇ ಅಧಿಕೃತ ದೃಢೀಕರಣವಿಲ್ಲ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಡಿಎಂಕೆ ವಕೀಲರು ಕೂಡ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಂಗಳವಾರ ಬಾಲಾಜಿ ಅವರ ಕರೂರ್ ನಿವಾಸ ಮತ್ತು ರಾಜ್ಯ ಸಚಿವಾಲಯದ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದರ ಜೊತೆಗೆ ಕರೂರಿನಲ್ಲಿರುವ ಅವರ ಸಹೋದರ ಮತ್ತು ಆಪ್ತ ಸಹಾಯಕನ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಈ ದಾಳಿಗಳು ಬಾಲಾಜಿ ಅವರು ಡಿಎಂಕೆ ಸೇರುವ ಮೊದಲು 2011 ರಿಂದ 2015 ರವರೆಗೆ ಎಐಎಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗಿನ ಆರೋಪಗಳಿಗೆ ಸಂಬಂಧಿಸಿದೆ.
ಡಿಎಂಕೆ ಪ್ರಬಲ ವ್ಯಕ್ತಿಯ ವಿರುದ್ಧ ಉದ್ಯೋಗಕ್ಕಾಗಿ ನಗದು ಹಗರಣದ ಕುರಿತು ಪೊಲೀಸ್ ಮತ್ತು ಇ.ಡಿ. ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ತಿಂಗಳುಗಳ ನಂತರ ಈ ದಾಳಿಗಳು ನಡೆದಿವೆ. ನಂತರ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ, ಅಲ್ಲಿ ಸಂಸ್ಥೆಯು ಅವರ ಕಸ್ಟಡಿಗೆ ಕೋರಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ