ಬೆಂಗಳೂರು : ಬಿಬಿಎಂಪಿ ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಯೋಗವು ಬುಧವಾರ ರಾಜ್ಯಪಾಲರಿಗೆ ದೂರು ನೀಡಿದೆ.
ರಾಜ್ಯಪಾಲರಿಗೆ ಶಾಸಕ ಆರ್.ಅಶೋಕ್ ನೇತೃತ್ವದ ನಿಯೋಗದಿಂದ ದೂರು ನೀಡಲಾಗಿದೆ. ದೂರು ನೀಡಿದ ಬಳಿಕ ಮಾತನಾಡಿದ ಆರ್. ಅಶೋಕ್ , ಬಿಬಿಎಂಪಿ ಕಚೇರಿಯನ್ನು ಕಾಂಗ್ರೆಸ್ ಕಚೇರಿ ಮಾಡಲು ಯತ್ನಿಸಲಾಗುತ್ತಿದೆ ಸುರ್ಜೇವಾಲರಿಗೂ ಬೆಂಗಳೂರಿಗೂ ಏನು ಸಂಬಂಧ ಎಂದು ಆರ್.ಅಶೋಕ್ ಪ್ರಶ್ನಿಸಿದರು.
ನಮ್ಮ ಸಂಸದರನ್ನ ಬಿಟ್ಟು ಅವರೊಬ್ಬರೇ ಏನು ಚರ್ಚೆ ಮಾಡುತ್ತಾರೆ. ಸಭೆಯಲ್ಲಿ ಸಚಿವರು, ಶಾಸಕರಿಗೆ ಬೆಲೆ ಇಲ್ಲವಾ..? ಇದು ನಾಟಕದ ಕಂಪನಿ ಅಲ್ಲ ಸರ್ಕಾರ. ಕಾಂಗ್ರೆಸ್‌ನವರು ಕರ್ನಾಟಕವನ್ನೇ ಎಟಿಎಂ ಮಾಡಲು ಹೊರಟಿದ್ದಾರೆ. ಒಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆಗ ರಾಜ್ಯ ದಿವಾಳಿಯಾಗಲು ಕೇಂದ್ರವೇ ಕಾರಣ ಎಂದು ಅದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಆರ್.ಅಶೋಕ ಕಿಡಿಕಾರಿದರು.
ಸುರ್ಜೇವಾಲರನ್ನು ಸಿಎಂ ಮಾಡಿಕೊಂಡು ಸಭೆ ನಡೆಸಲಿ: ಎಚ್‌ಡಿಕೆ ವಾಗ್ದಾಳಿ
ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಏನೇ ಸೂಚನೆ ಇದ್ದರೂ ಅದು ಕಾಂಗ್ರೆಸ್ ಕಚೇರಿ ಒಳಗೆ ಇರಲಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸುರ್ಜೇವಾಲ ಅವರು ಸೂಚನೆ ನೀಡುವುದು ಸರಿಯಲ್ಲ. ಅವರು ಸೂಚನೆ ನೀಡುತ್ತಾರೆಂದಾದರೆ ರಾಜ್ಯ ಕಾಂಗ್ರೆಸ್‌ನವರು ಅವರನ್ನೇ ಮುಖ್ಯಮಂತ್ರಿ ಮಾಡಿಕೊಂಡು ಸಭೆ ನಡೆಸಲಿ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ. ನಿನ್ನೆ ಅವರು ಸಭೆ ನಡೆಸುವ ಭಾವಚಿತ್ರ ಹೊರಬಂದಿದೆ. ಅವರ ಮಂತ್ರಿಗಳೇ ಅದನ್ನ ಹೊರಗೆ ಬರುವಂತೆ ಮಾಡಿದ್ದಾರೆ. ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ