ಕಾರವಾರ: ಕರಾವಳಿ ಜಿಲ್ಲೆಗಳಿಗೆ ಬಿರುಗಾಳಿ ಎಚ್ಚರಿಕೆ, 5 ದಿನ ಸಮುದ್ರಕ್ಕಿಳಿಯದಂತೆ ಸೂಚನೆ

ಕಾರವಾರ: ಭಾರತೀಯ ಹವಾಮಾನ ಇಲಾಖೆ ಮತ್ತು INCOIS ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ “ಹೈ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಅರಬ್ಬೀ ಸಮುದ್ರದಲ್ಲಿ ಉಂಟಾದ ‘ಬಿಪೋರ್‌ ಜಾಯ್‌’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯ ಮೇಲೂ ಆಗಲಿದೆ. ಅದರ ತೀವ್ರತೆಯ ಪರಿಣಾಮದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮುಂದಿನ ಐದು ದಿನಗಳು ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಬಿಪೋರ್‌ ಜಾಯ್‌ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯ ಕರಾವಳಿ ತೀರದಲ್ಲಿ ಬಿರುಗಾಳಿ ಬೀಸಲಿದೆ. 3-4 ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿವೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕರಾವಳಿ ತೀರದ ಜನರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಕಡಲ ತೀರದಲ್ಲಿ ಓಡಾಡುವುದು ಕೂಡ ಈ ಸಮಯದಲ್ಲಿ ಅಪಾಯ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಲ್ಲದೆ, ಅಪಾಯ ನಿಯಂತ್ರಿಸಲು ತುರ್ತು ನಿರ್ವಹಣಾ ಕೇಂದ್ರ ಕೂಡ ತೆರೆಯಲಾಗಿದೆ.
ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣದಿಂದಾಗಿ ಮುಂದಿನ ಐದು ದಿನಗಳವರೆಗೆ ಅಂದರೆ ಜೂನ್‌ 19 ರವರೆಗೆ ಕರಾವಳಿ ತೀರದಲ್ಲಿ ಅಪಾಯಕಾರಿ ವಾತಾವರಣ ಇರಲಿದೆ ಎಂದು ಎಚ್ಚರಿಕೆ ನೀಡಿದೆ. ಸಾರ್ವಜನಿಕರು, ಪ್ರವಾಸಿಗರು, ಸ್ಥಳೀಯರು, ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯ 12 ತಾಲೂಕಿನಲ್ಲಿಯೂ ಸಹಾಯವಾಣಿ ಕೇಂದ್ರ ತೆಗೆಯಲಾಗಿದೆ. ನೋಡಲ್‌ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಸಹಾಯವಾಣಿ ಕೆಲಸ ಮಾಡಲಿದೆ. ತುರ್ತು ಸಂದರ್ಭದಲ್ಲಿ ಜನರು ಉತ್ತರ ಕನ್ನಡ ಜಿಲ್ಲಾ ಕಂಟ್ರೋಲ್‌ ರೂಮ್‌ 08382-229857/ 1077 ವಾಟ್ಸ್‌ಆ್ಯಪ್‌- 9483511015 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement