ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ : ಪೋಕ್ಸೊ ಪ್ರಕರಣ ಕೈಬಿಟ್ಟ ಪೊಲೀಸರು

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್‌ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಆರೋಪದ ದೂರಿನಲ್ಲಿ, ದೆಹಲಿ ಪೊಲೀಸರು 1,500 ಪುಟಗಳ ಆರೋಪಪಟ್ಟಿಯನ್ನು (ಚಾರ್ಜ್‌ಶೀಟ್) ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ ಗುರುವಾರ ಸಲ್ಲಿಸಿದ್ದಾರೆ.
180ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಸಿಂಗ್‌ ವಿರುದ್ಧ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಆಕ್ರೋಶವನ್ನು ಉಂಟುಮಾಡುವ ಉದ್ದೇಶದಿಂದ ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ ಪ್ರಯೋಗ) 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಅಪರಾಧಗಳಿಗಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ.
ಪೋಕ್ಸೊ ಕೈಬಿಟ್ಟ ಪೊಲೀಸ್‌
ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೊ ಪ್ರಕರಣವನ್ನು ದೆಹಲಿ ಪೊಲೀಸರು ರದ್ದು ಮಾಡಿದ್ದಾರೆ. ಈ ಕುರಿತು 550 ಪುಟಗಳ ವರದಿಯನ್ನು ಸಲ್ಲಿಸಲಾಗಿದೆ. ದೂರು ದಾಖಲಿಸಿದ್ದ ಅಪ್ರಾಪ್ತೆ, ಆ ಬಳಿಕ ತನ್ನ ಹೇಳಿಕೆಯನ್ನು ವಾಪಸ್‌ ಪಡೆದಿದ್ದಳು. ಇದಲ್ಲದೆ ಬ್ರಿಜ್ ಭೂಷಣ್ ವಿರುದ್ಧ ಸುಳ್ಳು ದೂರು ಸಲ್ಲಿಸಿದ್ದೆ ಎಂದು ಬಾಲಕಿಯ ತಂದೆ ಹೇಳಿಕೆ ನೀಡಿದ್ದರು. ಈ ದೂರಿಗೆ ಪೂರಕವಾಗಿ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಹೇಳಿರುವ ದೆಹಲಿ ಪೊಲೀಸರು, ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ ಕಾಯ್ದೆಯಡಿ ದಾಖಲಾಗಿದ್ದ ದೂರಿನ ರದ್ದತಿ ವರದಿಯನ್ನು ಸಲ್ಲಿಸಿದ್ದಾರೆ. ಈ ಕುರಿತ ವಿಚಾರಣೆ ಜುಲೈ 4 ರಂದು ನಡೆಯಲಿದೆ.
ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಜೂನ್‌ 15ರ ಒಳಗಾಗಿ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ಭರವಸೆ ನೀಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement